ಬೆಂಗಳೂರು: ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ, ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸಮುದಾಯದ ಆಂತರಿಕ ವಿಷಯಗಳ ಚರ್ಚೆ ನಡೆಸಲಾಗುವುದು. ಹಾಗೆಯೇ, ಸಮಾಜದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. 90 ಬ್ರಾಹ್ಮಣ ಅಂಗ ಸಂಸ್ಥೆಗಳನ್ನು ಒಳಗೊಂಡಿದ್ದ ಈ ಬ್ರಾಹ್ಮಣ ಮಹಾಸಭಾ ಇದೀಗ 900 ಬ್ರಾಹ್ಮಣ ಉಪ ಸಂಘಗಳನ್ನು ರಾಜ್ಯಾದ್ಯಂತ ಒಳಗೊಂಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೀತಿಯಂತೆ ಶೇ 10ರಷ್ಟು ಮೀಸಲಾತಿಯನ್ನು ಕರ್ನಾಟಕಕ್ಕೂ ಅಳವಡಿಸುವಂತೆ ಹಾಗೂ ಬ್ರಾಹ್ಮಣರ ಸಮುದಾಯ ಗುರುತಿಸುವಂತಹ ಸರ್ಟಿಫಿಕೇಟ್ ಸರ್ಕಾರದ ವತಿಯಿಂದ ನೀಡುವಂತೆ ಅವರು ಒತ್ತಾಯಿಸಿದರು. ಬಡ ಬ್ರಾಹ್ಮಣರ ಕಲ್ಯಾಣ ನಿಧಿಗೆ ಸರ್ಕಾರ ಮೀಸಲಿಟ್ಟಿರುವ 25 ಕೋಟಿ ರೂಪಾಯಿಯನ್ನು ನೂರು ಕೋಟಿ ರೂಪಾಯಿಗೆ ಹೆಚ್ಚಿಸುವಂತೆ ಮಹಾಸಭಾ ಆಗ್ರಹಿಸಿದೆ.
ಬೃಹತ್ ಸಮ್ಮೇಳನ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯಮಟ್ಟದ 10ನೇ ಬ್ರಾಹ್ಮಣ ಬೃಹತ್ ಸಮ್ಮೇಳನ ಕುಂದಾಪುರದಲ್ಲಿ ಡಿಸೆಂಬರ್ 28 ಮತ್ತು 29 ರಂದು ನಡೆಯಲಿದೆ. ಕಳೆದ 40 ವರ್ಷಗಳಿಂದ ಮೂರು ವರ್ಷಕ್ಕೊಮ್ಮೆ ಒಂಭತ್ತು ಬಾರಿ ಬೆಂಗಳೂರು ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಮ್ಮೇಳನಗಳನ್ನು ನಡೆಸಿಕೊಂಡು ಬರಲಾಗಿದೆ. ಈ ಬಾರಿ ಕುಂದಾಪುರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಶೃಂಗೇರಿ ಶಾರದಾ ಪೀಠದ ಅಧ್ಯಕ್ಷರಾದ ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭಾರ್ಗವ ಜ್ಯೋತಿ ಬಿಡುಗಡೆ ಮಾಡಲಿದ್ದಾರೆ. ಡಿಸೆಂಬರ್ 29ರಂದು ಬೆಳಗ್ಗೆ 7.30ಕ್ಕೆ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ವಿಪ್ರ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ನಡೆಯಲಿದೆ ಎಂದು ಕೆ.ಎನ್. ವೆಂಕಟನಾರಾಯಣ ತಿಳಿಸಿದರು.