ಬೆಂಗಳೂರು: ಶಿವರಾತ್ರಿ ಪ್ರಯುಕ್ತ ಜಾಗರಣೆ ಮಾಡಿ ಶಿವ ನಾಮಸ್ಮರಣೆಯಲ್ಲಿ ಮಿಂದೆದ್ದ ಭಕ್ತರು ಇಂದು ನಗರದ ವಿವಿಧ ಶಿವ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.
ನಗರದ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನವನ್ನು ಬರೀ ಹೂವು ಮತ್ತು ತರಕಾರಿಗಳನ್ನೇ ಬಳಸಿ ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ. ಪ್ರಾಚೀನ ದೇಗುಲಗಳಲ್ಲೊಂದಾದ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು, ಶಿವನ ದರ್ಶನ ಭಾಗ್ಯ ಪಡೆದುಕೊಳ್ಳುತ್ತಿದ್ದಾರೆ.
ಇನ್ನೂ ಇಂದು ಮಲ್ಲೇಶ್ವರಂನ ರಾಜಬೀದಿಗಳಲ್ಲಿ ಬ್ರಹ್ಮ ರಥೋತ್ಸವ ಕಾರ್ಯ ನಡೆಯಲಿದೆ. ಈ ಬಗ್ಗೆ ಕಾಡುಮಲ್ಲೇಶ್ವರದ ಗೆಳಯರ ಬಳಗದ ಸದಸ್ಯ ರಕ್ಷಿತ್ ಶಿವರಾಂ ಮಾತಾನಾಡಿ, ಇಂದು ಮೂರು ರೀತಿಯ ವಿಭಿನ್ನ ರಥೋತ್ಸವ ನಡೆಯಲಿದೆ. ಮೊದಲನೆಯದಾಗಿ ರಥಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ನಂತರ ದಿನವಿಡೀ, ಶಿವನಿಗೆ ವಿವಿಧ ಪೂಜೆಗಳು ನಡೆಯಲಿದೆ. ಕೊನೆಯಲ್ಲಿ ಭಕ್ತರಿಗೆ ರಥಬೀದಿಗಳಲ್ಲಿ ಪ್ರಸಾದ ವಿನಿಯೋಗ ಮಾಡಲಿದ್ದೇವೆ ಅಂತ ತಿಳಿಸಿದರು.