ಬೆಂಗಳೂರು: ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಮಾಸ್ಕ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು, ಸಾವಿರ ರೂಪಾಯಿ ದಂಡ ವಿಧಿಸಲು ಸೂಚಿಸಿದೆ. ಇಂದು ಬೆಳಗ್ಗೆ ಹಲಸೂರು ಕೆರೆ ಬಳಿ ವಾಯು ವಿಹಾರಕ್ಕೆ ಬಂದ ಯುವಕ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಹಾಕದ್ದಕ್ಕೆ ದಂಡ ಕಟ್ಟಿ ಎಂದಾಗ ಯುವಕ ಗಳಗಳನೆ ಅತ್ತಿದ್ದಾನೆ.
ಯುವಕನ ವರ್ತನೆ ನೋಡಿ ಮಾರ್ಷಲ್ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಮಾರ್ಷಲ್ಗಳನ್ನು ನೋಡ್ತಿದ್ದಂತೆ ಮಾಸ್ಕ್ಗಾಗಿ ಹುಡಕಾಟ ನಡೆಸಿದ್ದಾನೆ. ಜೇಬಿನಲ್ಲಿ ಕೈ ಹಾಕಿ ಮಾಸ್ಕ್ ಹುಡುಕಾಡಿದ್ದಾನೆ. ಮಾಸ್ಕ್ ಹಾಕಿಲ್ಲ, ದಂಡ ಕಟ್ಟಿ ಅನ್ನುತ್ತಿದ್ದಂತೆ ಕಣ್ಣೀರು ಸುರಿಸಿ, ದುಡ್ಡಿಲ್ಲ. ಸಣ್ಣ ಬ್ಯುಸಿನೆಸ್ ಮಾಡುತ್ತಾ ಬದುಕುತ್ತಿದ್ದೇನೆ. ದಂಡ ಕಟ್ಟುವಷ್ಟು ಹಣ ಇಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಪ್ರತಿ ದಿನ ನೂರಾರು ಮಂದಿ ಮಾಸ್ಕ್ ಧರಿಸದೆ ಹೊರ ಬರುತ್ತಿದ್ದು, ಲಕ್ಷಾಂತರ ರೂಪಾಯಿ ದಂಡ ತೆರುತ್ತಿದ್ದಾರೆ. ಆದರೆ ಕೊರೊನಾ ಬಗ್ಗೆ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ 394 ಮಾಸ್ಕ್ ಹಾಕದ ಜನರಿಂದ ಬಿಬಿಎಂಪಿ 3,94,067 ರೂ. ದಂಡ ಸಂಗ್ರಹಿಸಿದೆ. ಸಾಮಾಜಿಕ ಅಂತರ ಕಾಪಾಡದ 42 ಜನರಿಂದ 42,000 ದಂಡ ಸಂಗ್ರಹಿಸಲಾಗಿದ್ದು, ಒಟ್ಟು ಒಂದೇ ದಿನಕ್ಕೆ 436 ಜನರಿಂದ 4,36,067 ರೂ. ದಂಡ ಸಂಗ್ರಹಿಸಲಾಗಿದೆ.