ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬೋವಿ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಬೋವಿ ಸಮುದಾಯದ ಮುಖಂಡರು ಹಾಗೂ ಅರವಿಂದ ಲಿಂಬಾವಳಿ ಬೆಂಬಲಿಗರು ಆಗಮಿಸಿದ್ದರು. ಸಿಎಂ ನಿವಾಸದ ಎದುರೇ ನಿಂತು ಧಿಕ್ಕಾರ ಕೂಗಿ ಅಸಮಧಾನ ಹೊರಹಾಕಿದ್ರು. ಮಹಾದೇವಪುರದಿಂದ ಬಂದಿದ್ದ 50-60 ಬೆಂಬಲಿಗರು ಪ್ರತಿಭಟನೆ ನಡೆಸಿ ಸಿಎಂ ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಶಾಸಕರಾದ ಅರವಿಂದ ಲಿಂಬಾವಳಿ, ಎಸ್ ರಘು, ಚಂದ್ರಪ್ಪ ಮತ್ತು ಗೂಳಿಹಟ್ಟಿ ಶೇಖರ್ಗೆ ಅನ್ಯಾಯವಾಗಿದೆ. ನಾಲ್ವರಿಗೂ ರಾಜೀನಾಮೆ ಕೊಡುವಂತೆ ಮನವಿ ಮಾಡಿದ್ದೇವೆ. ನಾಳೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಬೋವಿ ಸಮಾಜದ ಮುಖಂಡರು ಎಚ್ಚರಿಕೆ ರವಾನಿಸಿದರು.
ಪ್ರತಿಭಟನೆಯಲ್ಲಿ ಒಡಕು: ಬೋವಿ ಸಮಾಜದ ಪ್ರತಿಭಟನಾಕಾರರಲ್ಲೇ ಒಡಕು ಮೂಡಿದ ದೃಶ್ಯ ಕಂಡುಬಂತು. ಕೆಲವರು ಧಿಕ್ಕಾರ ಕೂಗಿದರೆ ಮತ್ತಷ್ಟು ಮಂದಿ ಪ್ರತಿಭಟನೆ ಬೇಡ ಅಂತಾ ಮನವಿ ಮಾಡಿದ್ರು. ಸಿಎಂಗೆ ಧಿಕ್ಕಾರ ಕೂಗಿದವರಿಗೆ ಬುದ್ಧಿವಾದ ಹೇಳಲು ಬೋವಿ ಸಮಾಜದ ಅಧ್ಯಕ್ಷರು ಮುಂದಾದರು. ನಾವು ಬಂದಿರೋದು ಧಿಕ್ಕಾರ ಕೂಗೋದಕ್ಕಲ್ಲ, ಮನವಿ ಮಾಡಲು ಎಂದಾಗ ಪ್ರತಿಭಟನಾಕಾರರು ಸುಮ್ಮನಾದರು.