ಬೆಂಗಳೂರು: ಹೈಫೈ ಕಾರನ್ನ ಪ್ರವಾಸಕ್ಕೆಂದು ಬುಕ್ ಮಾಡಿ ಬಳಿಕ ಅದನ್ನ ಎಗರಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಜಸ್ಟ್ ಡಯಲ್ ಮೂಲಕ ಮೈಸೂರಿಗೆ ಪ್ರವಾಸಕ್ಕೆ ಹೋಗಲು ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಪರ್ಕಿಸಿ ಕಾರು ಬುಕ್ ಮಾಡಿದ್ದ. ಹೀಗಾಗಿ ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಚಾಲಕ ಅರುಣ್ಗೆ ಮೈಸೂರಿಗೆ ಹೋಗುವಂತೆ ಹೇಳಿದ್ರು. ಟ್ರಾವೆಲ್ಸ್ ಮಾತಿನಂತೆ ಚಾಲಕ ಅರುಣ್ ಕಾನಿಷ್ಕ ಹೊಟೇಲ್ಗೆ ಪ್ರಯಾಣಿಕನನ್ನು ಕರೆ ತರಲು ಹೋಗಿದ್ದ.
ಈ ವೇಳೆ ಕಾರ್ ಹತ್ತಿದ್ದ ಆರೋಪಿ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಮಿಸ್ ಚಿಫ್ ಹೋಟೆಲ್ಗೆ ತೆರಳುವಂತೆ ಹೇಳಿದ್ದ. ಚಾಲಕ ಹೋಟೆಲ್ಗೆ ಕರೆದೊಯ್ದಾಗ ಆರೋಪಿ ರೂಮ್ ನಂ.105ರಲ್ಲಿ ನನ್ನ ಸ್ನೇಹಿತ ಇದ್ದಾನೆ. 10 ಸಾವಿರ ಹಣ ಕೊಡ್ತಾರೆ. ತೆಗೆದುಕೊಂಡು ಬಾ ಎಂದು ಚಾಲಕ ಅರುಣ್ನನ್ನು ಕಳುಹಿಸಿದ್ದ. ಚಾಲಕ ತೆರಳಿದಾಗ ಈ ವೇಳೆ ಕಾರು ಎಸಿ ಆನ್ ಮಾಡಿ ಹೋಗುವಂತೆ ಚಾಲಕನಿಗೆ ಹೇಳಿದ್ದನಂತೆ ಆರೋಪಿ.
ಹೀಗಾಗಿ ಚಾಲಕ ಕೀ ಕಾರ್ನಲ್ಲೇ ಬಿಟ್ಟು ಹಣ ತೆಗೆದುಕೊಂಡು ಬರಲು ಹೋದಾಗ ಕಾರ್ ಸಮೇತ ಆರೋಪಿ ಎಸ್ಕೇಪ್ ಆಗಿದ್ದಾನೆ. ಚಾಲಕ ಅರುಣ್ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಮೊಬೈಲ್ ಲೊಕೇಷನ್ ಆಧರಿಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.
ಇನ್ನು ಆರೋಪಿ ಕದ್ದ ಇನೋವಾ ಕಾರ್ ತುಮಕೂರಿನಲ್ಲಿ ಇಟ್ಟಿದ್ದು, ಇದನ್ನ ರಿಕವರಿ ಮಾಡಿದ್ದಾರೆ. ಆರೋಪಿ ಇದೇ ರೀತಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ.