ಬೆಂಗಳೂರು: ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಬುಟ್ಟಿ ಭದ್ರಪಡಿಸಿಕೊಳ್ಳಲು ಏಳನೇ ವೇತನ ಆಯೋಗ ಜಾರಿ ಮಾಡಲು ಅಧಿಕಾರಿಗಳ ವೇತನ ಸಮಿತಿ ರಚನೆ ಬಜೆಟ್‌ನಲ್ಲಿ ಘೋಷಣೆ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಸರ್ಕಾರಿ ನೌಕರರಿಗೆ ಬೊಮ್ಮಾಯಿ ಚೊಚ್ಚಲ ಬಜೆಟ್ ನಿರಾಶೆ ಮೂಡಿಸಿದ್ದು, ಹೊಸ ಭರವಸೆ ಮೂಲಕ ನೌಕರರ ಮನವೊಲಿಸುವ ಪ್ರಯತ್ನಕ್ಕೆ ಈಗ ಅವರು ಮುಂದಾಗಿದ್ದಾರೆ. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಕೇಂದ್ರ, ರಾಜ್ಯದ ವೇತನ ಕುರಿತು ಸಮಿತಿ ರಚಿಸುವುದಾಗಿ ಹೇಳಿದ್ದ ಸಿಎಂ ಈಗ ಇದೇ ವರ್ಷದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.
ಸರ್ಕಾರಿ ನೌಕರರ ಹಿತಾಸಕ್ತಿ ಈಡೇರಿಸುವ ಜವಾಬ್ದಾರಿ ನಮ್ಮದು, ಸೂಕ್ತ ಸಮಯದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಸಂಘಕ್ಕೆ ತಿಳಿಸಿದ್ದು ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದ್ದಾರೆ.
ಇನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಸರ್ಕಾರಿ ನೌಕರರ ಸಂಘದ ಬೇಡಿಕೆ ಪರಿಗಣಿಸುವಂತೆ ಸಲಹೆ ನೀಡಿ ಪತ್ರ ಬರೆದಿದ್ದರು, ಬಜೆಟ್‌ನಲ್ಲಿ ಈ ಅಂಶ ಇಲ್ಲದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೊಂದಿಗೂ ಸಿಎಂ ಮಾತುಕತೆ ನಡೆಸಿ ವಿವರಣೆ ನೀಡಿದ್ದಾರೆ. ಸಮಿತಿ ರಚನೆ ಕುರಿತು ಸಧ್ಯದಲ್ಲೇ ನಿರ್ಧಾರ ಪ್ರಕಟಿಸುವ ಅಭಯ ನೀಡಿದ್ದು, ಸರ್ಕಾರಿ ನೌಕರರ ಸಂಘದ ಮನವೊಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಯಡಿಯೂರಪ್ಪ ಕೂಡ ಸಮ್ಮತಿಸಿದ್ದಾರೆ ಎನ್ನಲಾಗುತ್ತಿದೆ.
ಹೋರಾಟದ ಎಚ್ಚರಿಕೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಮಂಡಿಸಿರುವ 2022-23 ರ ಬಜೆಟ್ ಅನ್ನು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಖಂಡಿಸಿದ್ದಾರೆ.
ರಾಜಸ್ಥಾನ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ NPS ರದ್ದುಗೊಳಿಸಿತ್ತು ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಪಿಂಚಣಿ ರದ್ದು ಗೊಳಿಸುವ ನಂಬಿಕೆಯನ್ನು ಸಂಘ ಹೊಂದಿತ್ತು. ಆದರೆ ಈ ಬಾರಿಯ ಬಜೆಟ್ 2,50,000 ಸರ್ಕಾರಿ ಹಾಗೂ ಬೋರ್ಡ್ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಅಧಿಕ NPS ನೌಕರರನ್ನು ನಮ್ಮ ಸರ್ಕಾರ ಬಜೆಟ್‌ನಲ್ಲಿ ನಿರಾಸೆಗೊಳಿಸಿದೆ. ಹೀಗಾಗಿ ಈ ಬಜೆಟ್ ಅನ್ನು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ತೀವ್ರವಾಗಿ ವಿರೋಧಿಸಿ ಅತಿ ಶೀಘ್ರದಲ್ಲಿ ಸರ್ಕಾರದ ಈ ವಿರೋಧ ನೀತಿಯ ಹೋರಾಟಕ್ಕೆ ಧುಮುಕಲಿದೆ ಎಂದು ಶಾಂತಾರಾಮ ಎಚ್ಚರಿಸಿದ್ದಾರೆ.
ಮುಂದಿನ ಚುನಾವಣೆ ಲೆಕ್ಕಾಚಾರ: ಸಧ್ಯ ರಾಜ್ಯದಲ್ಲಿ 5.20 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರ ಕುಟುಂಬದ ಸುಮಾರು 30 ಲಕ್ಷ ಸದಸ್ಯರು ಇದ್ದು, ಬಹುದೊಡ್ಡ ಮತ ಬ್ಯಾಂಕ್ ಆಗಿದೆ. ಮುಂದಿನ ವರ್ಷ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ಸರ್ಕಾರಿ ನೌಕರರು ಸರ್ಕಾರದ ವಿರುದ್ಧ ಅಸಮಧಾನಗೊಳ್ಳುವುದು ಬಿಜೆಪಿಗೆ ಭವಿಷ್ಯದ ಹಿನ್ನಡೆಗೆ ಕಾರಣವಾಗುವ ಆತಂಕ ತಂದೊಡ್ಡಿದೆ.
ಹಾಗಾಗಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದು ಅಧಿಕಾರಿಗಳ ವೇತನ ಸಮಿತಿ ರಚನೆ ಕುರಿತು ಭರವಸೆ ನೀಡುತ್ತಿದ್ದಾರೆ. ಇದರಲ್ಲಿ ಬೊಮ್ಮಾಯಿ ಎಷ್ಟರಮಟ್ಟಿಗೆ ಸಫಲರಾಗಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಏನು?