ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಜಡ್ಜ್ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹಲಸೂರು ಗೇಟ್ ಠಾಣೆ ಇನ್ಸ್ಪೆಕ್ಟರ್ ತಲೆದಂಡವಾಗಿದೆ.
ಕೇಂದ್ರ ವಿಭಾಗದ ಡಿಸಿಪಿ, ಹಲಸೂರು ಗೇಟ್ ಠಾಣೆಯ ಇನ್ಸ್ಪೆಕ್ಟರ್ ಎನ್.ಹೆಚ್.ರಾಜಶೇಖರ್ ಅವರನ್ನು ಕರ್ತವ್ಯ ಲೋಪ ಹಿನ್ನೆಲೆ ಅಮಾನತು ಮಾಡಿದ್ದಾರೆ. ಪ್ರಕರಣದಲ್ಲಿ ಜಡ್ಜ್ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಗಿತ್ತು. ಅದರಂತೆ ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕೇಸ್ನ ಚಾರ್ಜ್ಶೀಟ್ ಸಲ್ಲಿಸಲು 90 ದಿನಗಳ ಕಾಲಾವಕಾಶವಿತ್ತು. 2020ರ ಅಕ್ಟೋಬರ್ 19ರಂದು ಪ್ರಕರಣ ನಡೆದಿದ್ದು, ಜನವರಿ 19ರೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕಿತ್ತು. ಆದರೆ, ಚಾರ್ಜ್ಶೀಟ್ ಸಲ್ಲಿಕೆ ಮಾಡುವಲ್ಲಿ ತಡ ಮಾಡಿದ್ದಕ್ಕೆ ಇನ್ಸ್ಪೆಕ್ಟರ್ ಎನ್.ಹೆಚ್.ರಾಜಶೇಖರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಈ ಬಗ್ಗೆ ಉತ್ತರ ನೀಡುವಂತೆ ಡಿಸಿಪಿಯವರು ಎನ್.ಹೆಚ್.ರಾಜಶೇಖರ್ಗೆ ನೋಟಿಸ್ ನೀಡಿದ್ದರು. ಆದರೆ, ರಾಜಶೇಖರ್ ಅದಕ್ಕೂ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲ. ಹೀಗಾಗಿ, ಇದೀಗ ಅಮಾನತು ಮಾಡಲಾಗಿದೆ.
ಪ್ರಕರಣದ ಹಿನ್ನಲೆ ಏನು?
2020ರ ಅಕ್ಟೋಬರ್ 19ನೇ ತಾರೀಖಿನಂದು 33ನೇ ಸಿಸಿಹೆಚ್ ಜಡ್ಜ್ ಸೀನಪ್ಪರಿಗೆ ಒಂದು ಪತ್ರ ಬಂದಿತ್ತು. ಆದನ್ನು ಸಂಜೆ 5 ಗಂಟೆಗೆ ತೆಗೆದು ನೋಡಿದ್ದ ನ್ಯಾಯಾಧೀಶರಾದ ಜಿ.ಎಂ.ಸೀನಪ್ಪರಿಗೆ ಆ ಪತ್ರದ ಒಳಗೆ ಬಂಡೆ ಬ್ಲಾಸ್ಟ್ ಮಾಡುವ ಡಿಡೋನೆಟರ್ ವೈರ್ ಇಟ್ಟಿದ್ದು ಕಂಡುಬಂದಿತ್ತು.
ಜಡ್ಜ್ ಸೀನಪ್ಪ ಅವರು ತಕ್ಷಣ ಸಿಸಿಬಿ ಕಮಿಷನರ್ಗೆ ಮಾಹಿತಿ ರವಾನೆ ಮಾಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು, ಅದನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದರು. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಆ ದಿನ ಸಂಜೆ 5 ಗಂಟೆಯಿಂದ ರಾತ್ರಿ 12ಗಂಟೆವರೆಗೂ 7 ಗಂಟೆಗಳ ಕಾಲ ಶೋಧಕಾರ್ಯ ನಡೆದಿತ್ತು.
ತುಮಕೂರಿನ ಗುಬ್ಬಿಯ ಚೇಳೂರಿನಿಂದ ಬರೆಯಲಾಗಿದೆ ಅನ್ನೋದನ್ನು ಪತ್ತೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದ ಹಲಸೂರು ಗೇಟ್ ಪೊಲೀಸರು, ತಿಪಟೂರಿನ ರಾಜಶೇಖರ್, ಗುಬ್ಬಿ ತಾಲೂಕಿನ ಹಾಗಲವಾಡಿಯ ವೇದಾಂತ, ಆನಂತ, ಶಿವಪ್ರಕಾಶ್ ಮತ್ತು ಬಸವಲಿಂಗಯ್ಯ ಎಂಬ ನಾಲ್ವರನ್ನು ಬಂಧಿಸಿದ್ದರು.
ಸದ್ಯ ಎಲ್ಲ ಆರೋಪಿಗಳು ಜೈಲಿನಲ್ಲಿದ್ದಾರೆ. ಆರೋಪಿ ರಾಜಶೇಖರ್ ಹಾಗೂ ರಮೇಶ್ ಇಬ್ಬರನ್ನೂ ಒಂದೇ ಮನೆಗೆ ಮದುವೆ ಮಾಡಿಕೊಡಲಾಗಿತ್ತು. ರಮೇಶ್ಗೆ ತೊಂದರೆ ಕೊಡಲು ಆರೋಪಿ ರಾಜಶೇಖರ್ ಪತ್ರ ಬರೆದು ಸಂಚು ರೂಪಿಸಿದ್ದ. ರಾಜಶೇಖರ್ ಹಾಗೂ ರಮೇಶ್ ನಡುವೆ ಆಸ್ತಿ ವಿಚಾರವಾಗಿ ಜಗಳವಿದ್ದ ಕಾರಣ ರಾಜಶೇಖರ್ ವೇದಾಂತ್ ಎಂಬುವವನ ಕೈಯಲ್ಲಿ ಪತ್ರ ಬರೆಸಿ, ಅದನ್ನು ಪೋಸ್ಟ್ ಮಾಡಿದ್ದ. ಅದರಲ್ಲಿ ರಾಗಿಣಿ ಮತ್ತು ಸಂಜನಾಗೆ ಬೇಲ್ ನೀಡಬೇಕು. ಇಲ್ಲದಿದ್ದರೆ, ಕಾರಿಗೆ ಬಾಂಬ್ ಕಟ್ಟಿ ಬ್ಲಾಸ್ಟ್ ಮಾಡುವುದಾಗಿ ಜಡ್ಜ್ಗೆ ಬೆದರಿಕೆ ಹಾಕಿದ್ದರು.
ಪತ್ರದಲ್ಲೇನಿತ್ತು?
ಶ್ರೀ...
ಸೀನಪ್ಪ, ಜಡ್ಜ್
33ನೇ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್
ಬೆಂಗಳೂರು
ನ್ಯಾಯಮೂರ್ತಿಗಳೇ, ನೀವುಗಳು ಗಮನವಿಟ್ಟು ಕೇಳಿ..
ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಡ್ರಗ್ಸ್ ಕೇಸ್ನಲ್ಲಿ ಭಾಗಿಯಾಗಿರುವ ಎಲ್ಲ ಅಪರಾಧಿಗಳಿಗೆ ಜಾಮೀನು ಕೊಡಬೇಕು. ಕೇಸ್ನಿಂದ ಎಲ್ಲರನ್ನೂ ವಜಾ ಮಾಡಬೇಕು.
ಕೊಲೆ, ಸುಲಿಗೆ, ಡಕಾಯಿತಿ ಕೇಸ್ಗಳಿಗೆ ಜಾಮೀನು ಕೊಡಬೇಕು ಮತ್ತು ಕೇಸ್ ವಜಾ ಮಾಡಬೇಕು. ನಿಮಗೆ ಹಣ ಬೇಕೆ? ನಿಮಗೆ ಏನು ಬೇಕು ಕೇಳಿ. ಇದರ ವಿರುದ್ಧ ನೀವು ಹೋದರೆ ನಿಮ್ಮ ಕಾರ್ ಇಂಜಿನ್ಗೆ ಬಾಂಬ್ ಇಟ್ಟು, ನಿಮ್ಮನ್ನ ಬ್ಲಾಸ್ಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.