ಬೆಂಗಳೂರು : 10 ವರ್ಷಗಳ ಹಿಂದೆ ಮಲ್ಲೇಶ್ವರ ಬಿಜೆಪಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಇಬ್ಬರು ಉಗ್ರರಿಗೆ ಏಳು ವರ್ಷ ಶಿಕ್ಷೆ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ತೀರ್ಪು ನೀಡಿದೆ. ಅಲ್ ಉಮಾ ಉಗ್ರ ಸಂಘಟನೆ ಸದಸ್ಯರಾದ ಜಾನ್ ನಾಸೀರ್ ಹಾಗೂ ಡ್ಯಾನಿಯಲ್ ಪ್ರಕಾಶ್ ಅವರಿಗೆ ಏಳು ವರ್ಷ ಜೈಲು ಶಿಕ್ಷೆ, 50 ಸಾವಿರ ರೂ ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಇಬ್ಬರು 22 ಹಾಗೂ 23ನೇ ಆರೋಪಿಗಳಾಗಿದ್ದು, ಕೃತ್ಯವೆಸಗಿರುವುದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು ನ್ಯಾ.ಗಂಗಾಧರ್ ಅವರು ಉಗ್ರರಿಗೆ ಶಿಕ್ಷೆ ವಿಧಿಸಿ ಆದೇಶಿಸಿದರು.
ಪ್ರಕರಣ ಸಂಬಂಧ ಒಟ್ಟು 16 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇಬ್ಬರು ತಪ್ಪೊಪ್ಪಿಕೊಂಡು ಶಿಕ್ಷೆಗೆ ಒಳಗಾದರೆ ಬಾಕಿ 14 ಮಂದಿ ವಿರುದ್ಧ ವಿಚಾರಣೆ ಮುಂದುವರೆದಿದೆ. ಆರೋಪಿಗಳ ವಿರುದ್ಧವಾಗಿ ಸರ್ಕಾರಿ ವಿಶೇಷ ಅಭಿಯೋಜಕ ರವೀಂದ್ರ ವಾದ ಮಂಡಿಸಿದ್ದರು.2013 ಏಪ್ರಿಲ್ 17 ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟವಾಗಿತ್ತು. ಘಟನೆ ಸಂಬಂಧ 16 ಮಂದಿ ಗಾಯಗೊಂಡಿದ್ದರು. ಆರೋಪಿಗಳು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾಗಿದ್ದರು.
ಬಂಧಿತ 16 ಮಂದಿ ಆರೋಪಿಗಳು ರಾಜ್ಯದ ನಾನಾ ಜೈಲಿನಲ್ಲಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸೈಯ್ಯದ್ ಅಲಿ ಎಂಬಾತ ತನ್ನ ತಪ್ಪಿನ ಬಗ್ಗೆ ಅರಿವಾಗಿ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ. ಇದಕ್ಕೆ ಕೆಂಡಾಮಂಡಲವಾಗಿದ್ದ ಸಹ ಆರೋಪಿಗಳು ಸೈಯ್ಯದ್ ವಿರುದ್ದ ಕಿಡಿಕಾರಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಬೆದರಿಕೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗದ ವಿವಿಧೆಡೆ ಶಂಕಿತ ಉಗ್ರ ಶಾರಿಕ್ ಕರೆದೊಯ್ದು ಸ್ಥಳ ಮಹಜರು ನಡೆಸಿದ ಎನ್ಐಎ