ಬೆಂಗಳೂರು: ನಾಗಸಂದ್ರ ಬಳಿಯ ದೊಡ್ಡ ಬಿದರಕಲ್ಲು ಪ್ರದೇಶದಲ್ಲಿರುವ ಫೋನಿಕ್ಸ್ ವಾಶ್‍ಟೆಕ್ ಗಾರ್ಮೆಂಟ್ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯು ಗಾರ್ಮೆಂಟ್ ಕಾರ್ಖಾನೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ.
ಈ ಬಾಯ್ಲರ್ ಸ್ಫೋಟದಲ್ಲಿ ಬಿ.ಸಿ.ಕಂಠಿ ಮತ್ತು ರಮೇಶ್ ಎಂಬ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅವಘಡ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದಾರೆ.
1948 ರ ಕಾರ್ಖಾನೆಗಳ ಕಾಯ್ದೆಯ ಪ್ರಕಾರ ಕಾರ್ಖಾನೆಯಲ್ಲಿ ಉಡುಪು ಒಗೆಯುವ ಘಟಕಕ್ಕೆ ಪರವಾನಗಿ ಪಡೆದಿರಲಿಲ್ಲ. ಅಂತೆಯೇ 1923ರ ಬಾಯ್ಲರ್ಗಳ ಕಾಯ್ದೆಯಡಿ ಬಾಯ್ಲರ್ ನೋಂದಣಿಯಾಗಿರಲಿಲ್ಲ. ಬಾಯ್ಲರ್ ಕಾರ್ಯನಿರ್ವಹಣೆಯಲ್ಲಿ ಗುಣಮಟ್ಟದ ಕಾರ್ಯನಿರ್ವಹಣಾ ವಿಧಾನವನ್ನು ಅನುಸರಿಸದ ಹಾಗೂ ಅತ್ಯಧಿಕ ಒತ್ತಡದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಫೋಟಗೊಂಡಿದೆ ಎಂಬ ವಿಚಾರ ತಪಾಸಣಾ ಸಮಯದಲ್ಲಿ ಬೆಳಕಿಗೆ ಬಂದಿದೆ ಎಂದು ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಅಪರ ನಿರ್ದೇಶಕ ಟಿ. ಆರ್. ರಮೇಶ್ ತಿಳಿಸಿದರು.