ಬೆಂಗಳೂರು: ಯುವ ದೇಹದಾರ್ಢ್ಯ ಪಟುವಿನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆ.ಆರ್.ಪುರಂನ ಹೀರಂಡಹಳ್ಳಿಯಲ್ಲಿ ನಡೆದಿದೆ. ಕೋಲಾರದ ಶ್ರೀನಿವಾಸಪುರ ಮೂಲದ ಶ್ರೀನಾಥ್ ಮೃತ ಯುವಕ. ಶ್ರೀನಾಥ್ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಓದಿನೊಂದಿಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ ನಿನ್ನೆ(ಮಂಗಳವಾರ) ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿದೆ. ಶ್ರೀನಾಥ್ ಸಾವಿನ ಬಗ್ಗೆ ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿ ಆತ್ಮಹತ್ಯೆ: ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಿಜ್ವಾನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಲ್ ಅಮೀನ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್ಎಲ್ಬಿ ಓದುತ್ತಿದ್ದ ರಿಜ್ವಾನ್, ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಯುವಕ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ: ಸ್ನೇಹಿತರ ನಡುವಿನ ಗಲಾಟೆ ಬಗೆಹರಿಸಲು ಹೋಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಿನ್ನೆ(ಮಂಗಳವಾರ) ಸಂಜೆ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸತೀಶ್ (25) ಮೃತ ಯುವಕನೆಂದು ತಿಳಿದುಬಂದಿದೆ. ಜ.9ರಂದು ಸ್ನೇಹಿತರ ಜತೆ ಪಾರ್ಟಿ ಮಾಡಿದ್ದ ಸತೀಶ್, ಅದೇ ಪಾರ್ಟಿಯಲ್ಲಿ ಸ್ನೇಹಿತರ ನಡುವಿನ ಗಲಾಟೆ ಬಗೆಹರಿಸುವ ಯತ್ನದಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆಗೊಳಗಾಗಿದ್ದ. ಎಡಗೈಗೆ ಗಾಯವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ದಾಸರಹಳ್ಳಿ ಬಳಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸತೀಶ್ ನಿನ್ನೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಆಸ್ಪತ್ರೆ ವಿರುದ್ಧ ನಿರ್ಲಕ್ಷ್ಯ ಆರೋಪ: ಸತತ ಎರಡು ದಿನಗಳ ಕಾಲ ಯಾವುದೇ ಚಿಕಿತ್ಸೆ ಮಾಡದೇ ಕೇವಲ ಬ್ಯಾಡೆಜ್ ಸುತ್ತಿರುವ ವೈದ್ಯರ ನಿರ್ಲಕ್ಷ್ಯವೇ ಸತೀಶ್ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿದ್ದಾರೆ. ಅಲ್ಲದೇ 50 ಸಾವಿರಕ್ಕೂ ಹೆಚ್ಚು ಹಣ ಕಟ್ಟಿಸಿಕೊಂಡ ಆಸ್ಪತ್ರೆಯ ಆಡಳಿತ ಮಂಡಳಿ, ಸೂಕ್ತ ಚಿಕಿತ್ಸೆ ಮಾಡದೇ ಕೇವಲ ಬ್ಯಾಂಡೆಜ್ ಸುತ್ತಿದ್ದರು. ಇದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ದೂರಿದ್ದಾರೆ. ಆದರೆ ಮದ್ಯಪಾನ ಮಾಡಿದ ವ್ಯಕ್ತಿಗೆ 24 ಗಂಟೆಗಳ ಕಾಲ ಚಿಕಿತ್ಸೆ ನೀಡುವುದಿಲ್ಲ ಎಂದು ಆಸ್ಪತ್ರೆಯ ಆಡಳಿಯ ಮಂಡಳಿಯವರು ಹೇಳುತ್ತಿದ್ದಾರೆ. ಸದ್ಯ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನು ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ