ಬೆಂಗಳೂರು : ರಾಜಧಾನಿ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್ಗಳು ಎಂಟ್ರಿ ಕೊಟ್ಟರೆ ನಿಗಮಗಳಿಂದ ನಡೆಯುತ್ತಿದ್ದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಿಂತು ಹೋಗುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಿಧಾನವಾಗಿ ಖಾಸಗಿಯವರ ಕಪಿ ಮುಷ್ಠಿಯೊಳಗೆ ಸಿಲುಕುತ್ತಿರುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಯಾಕಂದ್ರೆ, ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಮೂಲಕ ಖಾಸಗೀಕರಣ ಎಂಟ್ರಿ ಆಗಲಿದೆ.
ಈಗಾಗಲೇ ನಿಗಮದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು, ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಎಫೆಕ್ಟ್ನಿಂದ ಡ್ರೈವರ್ಗಳ ಕೆಲಸಕ್ಕೆ ಕುತ್ತು ಬೀಳುವ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ, ಕೆಎಸ್ಆರ್ಟಿಸಿ ಸಂಪೂರ್ಣ ಖಾಸಗೀಕರಣ ಮಾಡಲು ಹುನ್ನಾರು ನಡೆಯುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮೊದಲ ಹೆಜ್ಜೆಯಾಗಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಆಗಿದೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಎಂಟ್ರಿಯು ಬಿಎಂಟಿಸಿ ಡ್ರೈವರ್ಗಳ ಕೆಲಸ ಕಿತ್ತುಕೊಳ್ಳುವಂತೆ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನ ಬಿಎಂಟಿಸಿ ಖರೀದಿ ಮಾಡಿದೆ. ಈ ಪೈಕಿ ಇ-ಬಸ್ಗಳಿಗೆ ಖಾಸಗಿ ಸಂಸ್ಥೆಯವರೇ ಡ್ರೈವರ್ಗಳ ನೇಮಕ ಮಾಡಿಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಡೀಸೆಲ್ ಬಸ್ಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಶುರುವಾದರೆ ಬಿಎಂಟಿಸಿ ಬಸ್ ಡ್ರೈವರ್ಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಎಲೆಕ್ಟ್ರಿಕ್ ಬಸ್ಗಳಲ್ಲಿ ಕಂಡಕ್ಟರ್ ಮಾತ್ರ ಬಿಎಂಟಿಸಿ ನಿಗಮದವರೇ ಇರಲಿದ್ದು, ಡ್ರೈವರ್ ಖಾಸಗಿಯವರಾಗಿರುತ್ತಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇ-ಬಸ್‌ಗಳ ಸಂಖ್ಯೆ ಹೆಚ್ಚಳವಾದ್ರೆ ಚಾಲಕರಿಗೆ ನಿಗಮದಿಂದ ಗೇಟ್ ಪಾಸ್ ಸಾಧ್ಯತೆ ಇದೆ. ಬಿಎಂಟಿಸಿಯಲ್ಲಿ 15 ಸಾವಿರ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇ- ಬಸ್ಗಳು ಬಂದರೆ ಕಂಟಕವಾಗಲಿದೆ.
300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನ ಬಿಎಂಟಿಸಿ ಖರೀದಿಸಲು ಮುಂದಾಗಿದೆ. ಈಗಾಗಲೇ ಕೆಎಸ್ಆರ್ಟಿಸಿಯಲ್ಲಿ 50 ಹಾಗೂ ಬಿಎಂಟಿಸಿ 300 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಹೀಗಾಗಿ, ನಿಗಮಗಳಲ್ಲಿ ಹೊಸದಾಗಿ ಡ್ರೈವರ್ಗಳ ನೇಮಕಾತಿ ಇನ್ಮುಂದೆ ಆಗೋದು ಅನುಮಾನ ಎನ್ನಲಾಗಿದೆ.
ಈ ಕುರಿತು ಮಾತಾನಾಡಿರುವ ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕ್ಸ್ ಫೆಡರೇಷನ್ ಕಾರ್ಯದರ್ಶಿ ನಾಗರಾಜ್, ನಿಗಮಗಳು ಎಲೆಕ್ಟ್ರಿಕ್ ಬಸ್‌ಗಳನ್ನ ಖರೀದಿ ಮಾಡುವುದರಲ್ಲಿ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ, ಇದು ಹಿಂಬಾಗಿಲಿನಿಂದ ಖಾಸಗೀಕರಣವಾಗುತ್ತೆ ಅನ್ನೋದೇ ನಮ್ಮ ವಾದ. ಎಲೆಕ್ಟ್ರಿಕ್ ಬಸ್‌ಗಳನ್ನ ಸಂಸ್ಥೆ ಖರೀಸಿದರೆ ಕೇಂದ್ರದಿಂದ ಸಬ್ಸಡಿ ಸಿಗೋದಿಲ್ಲ. ಆದರೆ, ಖಾಸಗಿಯವರು ತೆಗೆದುಕೊಂಡರೆ ಅವರಿಗೆ ಒಂದು ಬಸ್ಗೆ 50 ಲಕ್ಷ ರೂ. ಸಿಗುತ್ತದೆ. ಇದು ಖಾಸಗೀಕರಣವಲ್ಲದೇ ಬೇರೆ ಏನು? ಅಂತಾ ಪ್ರಶ್ನೆ ಮಾಡಿದ್ದಾರೆ.
₹50 ಲಕ್ಷ ಸಬ್ಸಿಡಿ ತೆಗೆದುಕೊಂಡು ನಮಗೆ ಇ-ಬಸ್ ಕೊಟ್ಟರೆ ಇದರಲ್ಲಿ ಚಾಲಕರು, ಮೆಕ್ಯಾನಿಕ್ ಯಾರು ನಮ್ಮವರು ಇರೋಲ್ಲ, ಕೇವಲ ಕಂಡಕ್ಟರ್ ಒಬ್ಬರು ಮಾತ್ರ ಇರಲಿದ್ದು, ಶೇ.90ರಷ್ಟು ಖಾಸಗೀಕರಣ ಮಾಡಿದಂತೆ ಅಂತಾ ಆರೋಪಿಸಿದ್ದಾರೆ.