ಬೆಂಗಳೂರು: ನಗರದ ನಾಗವಾರ ರಿಂಗ್ ರಸ್ತೆಯ ಹೆಚ್ಬಿಆರ್ ಲೇಔಟ್ನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಈ ಘೋಷಣೆ ಮಾಡಿದ್ದಾರೆ. ಇಂದು ಮಧ್ಯಾಹ್ನ ನಡೆದ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಈ ಪ್ರಕಟಣೆ ಮಾಡಿದ್ದಾರೆ.
18 ಮೀ. ಎತ್ತರದ ಪಿಲ್ಲರ್ ಬಿದ್ದಿದೆ. ಘಟನೆಯಲ್ಲಿ ತಾಯಿ, ಮಗು ಮೃತಪಟ್ಟಿವೆ. ಈ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಿದ್ದು, ಇನ್ನಷ್ಟು ಮಾಹಿತಿಗಾಗಿ ಎಲ್ಲಾ ಎಂಜಿನಿಯರ್ ಜೊತೆಗೆ ಮಾತನಾಡುತ್ತೇನೆ. ಇಂಡಿಯನ್ ಇನ್ಸ್ಟಿಟ್ಯೂಟ್ ಸೈನ್ಸ್ಗೆ ಸಹ ಈ ಸಂಬಂಧ ಮನವಿ ಮಾಡುತ್ತೇವೆ. ಅವರು ಬಂದು ಪರಿಶೀಲನೆ ನಡೆಸುತ್ತಾರೆ. ಜೊತೆಗೆ ಚೀಫ್ ಎಂಜಿನಿಯರ್, ಕಂಟ್ರ್ಯಾಕ್ಟರ್ ಗೆ ನೋಟಿಸ್ ಕೊಡುತ್ತೇವೆ ಎಂದು ವಿವರಿಸಿದ್ದಾರೆ.
ಕಳಪೆ ಕೆಲಸವಲ್ಲ.. ಅಂಜುಂ ಪರ್ವೇಜ್ ಕಾಮಗಾರಿಯ ಕುರಿತು ಸಹ ಮಾತನಾಡಿದ್ದು, ಇದು ಕಳಪೆ ಕಾಮಗಾರಿಯಿಂದ ಆದ ದುರಂತವಲ್ಲ. ಸದ್ಯಕ್ಕೆ ಎರಡು ದಿನ ಕೆಲಸ ಸಂಪೂರ್ಣ ನಿಲ್ಲಿಸುತ್ತೇವೆ. ವರದಿ ಬಂದ ನಂತರ ಸಂಬಂಧಪಟ್ಟವರ ಮೇಲೆ ಕ್ರಮ ಆಗಲಿದೆ. ಮನುಷ್ಯರ ಕೆಲಸದ ವಿಚಾರದಲ್ಲಿ ತಪ್ಪಾಗಿದೆಯಾ ಅಥವಾ ತಾಂತ್ರಿಕ ಕಾರಣ ಇದೆಯಾ? ಎನ್ನುವುದು ಬೆಳಕಿಗೆ ಬರಬೇಕಿದೆ ಎಂದು ಹೇಳಿದ್ದಾರೆ.
ಏನಾಗಿತ್ತು?.. ನಾಗವಾರ ರಿಂಗ್ ರಸ್ತೆಯ ಹೆಚ್ಬಿಆರ್ ಲೇಔಟ್ನಲ್ಲಿ ಇಂದು ಬೆಳಗ್ಗೆ 10:30ರ ಸುಮಾರಿನಲ್ಲಿ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಇಬ್ಬರು ಅವಳಿ ಮಕ್ಕಳ ಜತೆ ಮನೆಯಿಂದ ಹೊರಟಿದ್ದರು. ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್ನಲ್ಲಿ ಬಿಡಲು ಮಾನ್ಯತಾ ಟೆಕ್ಪಾರ್ಕ್ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿದೆ. ಘಟನೆಯಲ್ಲಿ ತೇಜಸ್ವಿನಿ (35), ಎರಡೂವರೆ ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದಾರೆ. ಇನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಯಾವ ರೀತಿ ಮೆಟ್ರೋ ಪಿಲ್ಲರ್ ಕುಸಿದು ಬಿದ್ದಿದೆ ಎನ್ನುವುದು ಅಲ್ಲೇ ಇದ್ದ ಖಾಸಗಿ ಕಂಪನಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಕಷ್ಟು ವಾಹನ ಸಂಚಾರ ಇರುವ ರಸ್ತೆಯಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.
ಸಿಎಂ ಹೇಳಿದ್ದೇನು..?: ಬೆಂಗಳೂರಿನ ನಾಗವಾರದಲ್ಲಿ ಮೆಟ್ರೋ ಕಾಮಗಾರಿಯ ವೇಳೆ ಪಿಲ್ಲರ್ ಕುಸಿತದ ಅವಘಡದಿಂದಾಗಿ ಮಹಿಳೆ ಹಾಗೂ ಮಗುವಿನ ಸಾವಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 10 ಲಕ್ಷ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಘೋಷಿಸಿದ್ದಾರೆ.
ಅವರು ಧಾರವಾಡದ ಪ್ರವಾಸಿ ಮಂದಿರದಲ್ಲಿ ಪ್ರಧಾನಮಂತ್ರಿಗಳ ಜನವರಿ 12ರಂದು ಹುಬ್ಬಳ್ಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಸಂದರ್ಭ ಈ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯ ಪಿಲ್ಲರ್ ಕುಸಿತದಿಂದಾದ ಅವಘಡದ ಬಗ್ಗೆ ಪ್ರತಿಕ್ರಿಯೆ ನೀಡಿ, ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಕಾಮಗಾರಿಯ ಗುತ್ತಿಗೆದಾರರು, ಅವಘಡಕ್ಕೆ ಕಾರಣ ತಿಳಿಯಲು ತನಿಖೆಯನ್ನು ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೆಟ್ರೋ ಸಂಸ್ಥೆಯಿಂದ ಮೃತಪಟ್ಟವರಿಗೆ ಪರಿಹಾರ ದೊರೆಯಲಿದೆ ಎಂದಿದ್ದಾರೆ.
ಓದಿ: ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮಗ ಸಾವು.. ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ ಘೋಷಣೆ