ಬೆಂಗಳೂರು: ಅದೊಂದು ಸದಾ ಜನಸಂದಣಿ ಪ್ರದೇಶ. ಎಂದಿನಂತೆ ಅಲ್ಲಿ ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಗಿದ್ದ ಕಾರ್ಮಿಕರು. ಪಟಾಕಿ ಟ್ರಾನ್ಸ್ ಪೋರ್ಟ್ ಶಾಪ್ನಲ್ಲಿ ಕಾರ್ಮಿಕರು ಕಾರ್ಯನಿರತರಾಗಿದ್ದರೆ, ಪಕ್ಕದಲ್ಲಿದ್ದ ಪಂಕ್ಚರ್ ಅಂಗಡಿ ಮಾಲೀಕ ಬೈಕ್ಗಳಿಗೆ ಪಂಕ್ಚರ್ ಹಾಕುವ ಕಾಯಕದಲ್ಲಿ ನಿರತನಾಗಿದ್ದ. ಅನಿರೀಕ್ಷಿತವಾಗಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಇಬ್ಬರು ದಿನಗೂಲಿ ನೌಕರರು ನೌಕರರು ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿರುವ ವಿವಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪತಿ ಅಗ್ರಹಾರ ರಸ್ತೆಯಲ್ಲಿ ನಡೆದಿದೆ.
ಶ್ರೀ ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ದುರಂತ ಸಂಭವಿಸಿದ್ದ ಘಟನೆಯಲ್ಲಿ ಹೊಸ ಗುಡ್ಡದಹಳ್ಳಿ ನಿವಾಸಿ ಟಾಟಾ ಏಸ್ ಚಾಲಕ ಮನೋಹರ್, ಪಂಕ್ಚರ್ ಅಂಗಡಿ ಮಾಲೀಕ ಅಸ್ಲಾಂಪಾಷಾ ಮೃತಪಟ್ಟಿದ್ದಾರೆ. ಬರ್ಫಿ ವ್ಯಾಪಾರಿ ಸೇಮ್ಸ್ ರಾಜು (42), ಟೈರ್ ವ್ಯಾಪಾರಿ ಅಂಬುಸ್ವಾಮಿ (74), ಮಂಜುನಾಥ್ ಹಾಗೂ ಗಣಪತಿ ಎಂಬುವರು ಗಂಭೀರ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಗೋದಾಮು ಮಾಲೀಕ ಬಾಬು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿವಿಪುರಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಗೋದಾಮು ಮಾಲೀಕ ಬಾಬು ಹಲವು ವರ್ಷಗಳಿಂದ ತಮಿಳುನಾಡಿನಿಂದ ಹೋಲ್ಸೇಲಾಗಿ ಪಟಾಕಿ ತರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಪಟಾಕಿ ಟ್ರಾನ್ಸ್ ಪೋರ್ಟ್ ವ್ಯವಹಾರ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆ ಸೀತಾಪತಿ ಅಗ್ರಹಾರ ರಸ್ತೆಯ ಅಂಗಡಿ ಬಾಡಿಗೆ ಪಡೆದಿದ್ದರು. ಶ್ರೀ ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮು ತೆರೆದಿದ್ದು, ಅಕ್ಕ-ಪಕ್ಕದ ಅಂಗಡಿಗಳಿಗೂ ಪಟಾಕಿ ವ್ಯವಹಾರ ಮಾಡುವುದು ಗೊತ್ತಿರಲಿಲ್ಲವಂತೆ. ಇಂದು ಮಧ್ಯಾಹ್ನ 11.30 ರ ವೇಳೆ ಸ್ಫೋಟ ಸಂಭವಿಸಿದ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಘಟನಾ ಸ್ಥಳದಲ್ಲಿ ಯಾವುದೇ ರಾಸಾಯನಿಕ ಪದಾರ್ಥಗಳು, ಪೆಟ್ರೋಲಿಯಂ ಉತ್ಪನ್ನಗಳು ಪತ್ತೆಯಾಗಿಲ್ಲ. ಸ್ಮೋಕಿಂಗ್ ಮಾಡಿದ ಕುರುಹುಗಳಿಲ್ಲ. ಇವೆಲ್ಲ ಗಮನಿಸಿದರೆ ಮೇಲ್ನೊಟಕ್ಕೆ ಸ್ಫೋಟಕ ವಸ್ತುಗಳಿಂದ ಸ್ಫೋಟ ಸಂಭವಿಸಿದೆ. ಅವಘಡ ಕಾರಣ ತಿಳಿಯಲು ವಿಧಿವಿಜ್ಞಾನ ತಜ್ಞರು, ಶ್ವಾನದಳ ಹಾಗೂ ಅಗ್ನಿಶಾಮಕ ತಂಡದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ವರದಿ ಬಂದ ದುರಂತಕ್ಕೆ ನಿಖರ ಕಾರಣ ತಿಳಿಯಲಿದೆ ಎಂದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಖಾಕಿ
ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಸ್ಫೋಟದ ನಿಖರ ಕಾರಣಗಳ ಪತ್ತೆ ಹಚ್ಚುವ ಕಾಯಕದಲ್ಲಿ ನಿರತರಾಗಿದ್ದಾರೆ. ಪಟಾಕಿಯಿಂದ ದುರಂತ ಸಂಭವಿಸಿದೆಯಾ? ಕೆಮಿಕಲ್ನಿಂದಾಗಿ ಅವಘಡ ನಡೆದೆದಿಯಾ ? ಅಥವಾ ಪಂಕ್ಚರ್ ಶಾಪ್ ಏರ್ ಗ್ಯಾಸ್ ಸ್ಫೋಟ ಆಗಿದೆಯಾ ಎಂಬುದರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಫ್ ಎಸ್ ಎಲ್ ತಜ್ಞರು ಘಟನೆಗೆ ಸೂಕ್ತ ಕಾರಣ ಬಗ್ಗೆ ಪತ್ತೆ ಹಚ್ಚುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ..
ಏಳೆಂಟು ಮನೆಗಳಿಗೆ ಹಾನಿ.. ಹತ್ತಾರು ಬೈಕ್ ಗಳು ಜಖಂ
ಸ್ಫೋಟದ ಸದ್ದಿನ ತೀವ್ರತೆ ಸುಮಾರು 100 ಮೀಟರ್ವರೆಗೂ ವ್ಯಾಪಿಸಿದೆ. ಶಾಪ್ನಲ್ಲಿದ್ದ ಇಬ್ಬರು ಕಾರ್ಮಿಕರು ಸ್ಫೋಟದ ರಭಸಕ್ಕೆ 10 ಮೀಟರ್ ವರೆಗೂ ಹಾರಿ ಗೋಡೆಗೆ ಅಪ್ಪಳಿಸಿ ಬಿದ್ದಿದ್ದಾರೆ. ಮನೋಹರ್, ಅಸ್ಲಾಂ ಪಾಷಾ ಕೈ-ಕಾಲುಗಳು ಛಿದ್ರ-ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಇನ್ನು ಐವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಅಂಗಡಿ ಸೇರಿದಂತೆ ಏಳೆಂಟು ಮನೆಗಳ ಗಾಜು-ಕಿಟಕಿ ಪುಡಿಪುಡಿಯಾಗಿವೆ. ಮೇಲ್ಛಾವಣಿ ತಗಡಿನ ಶೀಟ್ಗಳು ಹಾರಿ ಹೋಗಿವೆ. ಹತ್ತಾರು ಬೈಕ್ಗಳು ಜಖಂ ಆಗಿವೆ. ಟಾಟಾ ಏಸ್ ಟೆಂಪೊ ನಜ್ಜುಗುಜ್ಜಾಗಿದೆ.
ಗೋದಾಮಿನಲ್ಲಿ ಏನಿತ್ತು ?
ಗೋದಾಮಿನಲ್ಲಿ 77 ಪಟಾಕಿ ಬಾಕ್ಸ್ ಇರುವುದು ಪತ್ತೆಯಾಗಿದೆ. 2 ಬಾಕ್ಸ್ ಬ್ಲಾಸ್ಟ್ ಆಗಿದ್ದು, ಒಂದೊಂದು ಬಾಕ್ಸ್ 15-20 ಕೆಜಿಯಷ್ಟು ಇದ್ದವು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಟಾಕಿ ಅಕ್ರಮವಾಗಿ ಇಡಲಾಗಿತ್ತು ಎಂದು ಮೇಲ್ನೊಟಕ್ಕೆ ತಿಳಿದುಬಂದಿದೆ.