ಬೆಂಗಳೂರು: ಮೊಬೈಲ್‌ನಲ್ಲಿ ಖಾಸಗಿ ಫೋಟೊ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಬೇರೆಯವರಿಗೆ ಕಳಿಸುವುದಾಗಿ ಬೆದರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಫ್ರೇಜರ್ ಟೌನ್ ನಿವಾಸಿ 39 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ರಾಜು ಎಂಬಾತನ ವಿರುದ್ಧ ಪುಲಕೇಶಿನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
2019 ಜ.10ರಂದು ರಾಜುನನ್ನು ಮಹಿಳೆ ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ನಂತರ ಪತಿ ರಾಜು ದಿನನಿತ್ಯ ಕುಡಿದು ಬಂದು ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಿದ್ದ. ಬೇರೆಯವರೊಂದಿಗೆ ಪತ್ನಿ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ಆಕೆಯ ಸಹೋದ್ಯೋಗಿಗಳಿಗೆ ಕರೆ ಮಾಡುತ್ತಿದ್ದ ಎನ್ನಲಾಗಿದೆ.
ನನ್ನ ಹೆಂಡತಿಗೂ ನಿಮಗೂ ಏನು ಸಂಬಂಧ ಎಂದು ಬೆದರಿಸುತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಪತಿ, ಮೊಬೈಲ್‌ನಲ್ಲಿ ಪತ್ನಿಯ ಖಾಸಗಿ ಫೋಟೊ, ವಿಡಿಯೋಗಳನ್ನು ಸೆರೆ ಹಿಡಿದು ಅದನ್ನು ಬೇರೆಡೆ ಸೇವ್ ಮಾಡಿಕೊಂಡು, ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿ ವಿಕೃತಿ ಮೆರೆಯುತ್ತಿದ್ದ ಎಂದು ಆರೋಪಿಸಲಾಗಿದೆ.
ಸಾಲದ್ದಕ್ಕೆ ಆರೋಪಿ ಕುಡಿದು ಬಂದು ಮದ್ಯ ಹಾಗೂ ಸಿಗರೇಟ್ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ. ಮಗನನ್ನು ಕೊಲೆ ಮಾಡಿ, ನಿನ್ನ ತಂಗಿ ಮೇಲೆ ಅತ್ಯಾಚಾರ ಎಸಗುವುದಾಗಿ ಹೆದರಿಸುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ನಾನು ನಿನಗಿಂತ ಸ್ಮಾರ್ಟ್ ಎಂದ ಪತಿ.. ಅಷ್ಟಕ್ಕೇ ಪತ್ನಿ ಮಾಡಿದ್ದೇನು ಗೊತ್ತೆ.!?
ವಿವಾಹವಾದ ಬಳಿಕ ಮಹಿಳೆ ಆರೋಪಿಗೆ ಕಾರೊಂದನ್ನು ಉಡುಗೊರೆಯಾಗಿ ಕೊಡಿಸಿದ್ದರು. ಪತ್ನಿಗೆ ಗೊತ್ತಿಲ್ಲದಂತೆ ಆರೋಪಿ ಬೇರೆಯವರಿಗೆ ಕಾರು ಮಾರಾಟ ಮಾಡಿದ್ದ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜು, ದುಪಟ್ಟಾದಿಂದ ಆಕೆಯ ಕತ್ತನ್ನು ಬಿಗಿದು ಹತ್ಯೆ ಮಾಡಲು ಯತ್ನಿಸಿದ್ದ.
ಪರಿಣಾಮ ಪತ್ನಿಗೆ ಉಸಿರುಗಟ್ಟಿ ಮಾತನಾಡಲು ಸಾಧ್ಯವಾಗದೇ ಕೈ ಕಾಲು ಒದರುತ್ತಿದ್ದಾಗ ಅಡುಗೆಮನೆಯಲ್ಲಿದ್ದ ವಸ್ತುಗಳು ಕಾಲಿಗೆ ಸಿಕ್ಕಿ ಕೆಳಗೆ ಬಿದ್ದು ಜೋರಾಗಿ ಶಬ್ದ ಉಂಟಾಗಿತ್ತು. ಶಬ್ದ ಕೇಳಿ ನೆರೆ-ಹೊರೆಯವರು ಇವರ ಮನೆಗೆ ಬಂದಿದ್ದರು. ನೆರೆ-ಹೊರೆಯವರನ್ನು ಕಂಡು ಆತಂಕಗೊಂಡ ಪತಿ, ಇವತ್ತು ನೀನು ಬದುಕಿದೆ. ಮುಂದೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿ ಹೊರಟು ಹೋಗಿದ್ದ.
ಈಗಾಗಲೇ ಆತ 3 ಮದುವೆಯಾಗಿದ್ದಾನೆ. ಈ ವಿಚಾರವನ್ನು ತಿಳಿಸದೇ ನನ್ನನ್ನು ವಿವಾಹವಾಗಿ ಇದೀಗ ನನಗೂ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕಾಲೇಜಿಗೆ ಹೋಗುತ್ತಿದ್ದವಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ