ಬೆಂಗಳೂರು: ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಹಾಗೂ ಮಸಿ ಬಳಿದಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ನಾಯಕರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಗಾಂಧಿ ಭವನದ ಗಾಂಧಿ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಉದ್ದೇಶಪೂರ್ವಕವಾಗಿ ಹಾಗೂ ಪೂರ್ವನಿಯೋಜಿತವಾಗಿ ಈ ಕೃತ್ಯ ನಡೆದಿದೆ. ಕಿಡಿಗೇಡಿಗಳು ಎಲ್ಲ ಸಿದ್ಧತೆ ಮಾಡಿಕೊಂಡು ಬಂದಿದ್ದರು. ದುರುದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಪೊಲೀಸರು ಸಹ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರವು ಸಹ ಈ ಕೃತ್ಯವನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಈ ಕೆಟ್ಟ ಕೃತ್ಯವನ್ನು ಈಗಲಾದರೂ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಂಧಿಸಿರುವ ಪೊಲೀಸರು ಹಾಗೂ ಮುಂದೆ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ನಾವು ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೋರಾಟಗಾರರು ಹೇಳಿದರು. ನಾಳೆ ನಾವು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಡುತ್ತಿದ್ದು, ಕಪ್ಪು ಮಸಿ ಬಳಿದಿರುವುದನ್ನು ಖಂಡಿಸಿ ಕಪ್ಪು ಬಟ್ಟೆ ಧರಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್, ಯುಧವೀರ್ ಮೇಲೆ ಮಸಿ ಎರಚಿದ ಕಿಡಿಗೇಡಿಗಳು
ಅಲ್ಲದೇ ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಆಗಬೇಕು ಎನ್ನುವುದು ನಮ್ಮ ಆಗ್ರಹ. ಬಂಧಿತ ಕಿಡಿಗೇಡಿಗಳು ಪೊಲೀಸರ ವಶದಲ್ಲಿದ್ದು, ಸೂಕ್ತ ತನಿಖೆ ನಡೆಸಿ ಅವರು ಯಾರು ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಗೃಹಸಚಿವರಿಗೆ ಇದ್ದು, ಅವರು ಈ ನಿಟ್ಟಿನಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪೊಲೀಸರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಇದೇ ಸಂದರ್ಭ ನೀಡಿದರು.