ಬೆಂಗಳೂರು: ಸರ್ಕಾರ ಕೃಷಿ ಇಲಾಖೆ ವರದಿಯಲ್ಲಿ ಕಬ್ಬು ಬೆಳೆದ ರೈತರಿಗೆ ಎಕರೆಗೆ 20 ಸಾವಿರ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ ಆದರೂ ಯಾಕೆ ಕಬ್ಬಿಗೆ ಕೇವಲ 50ರೂ ಹೆಚ್ಚುವರಿ ನಿಗದಿ ಮಾಡಲಾಗಿದೆ ಎಂದು ಫ್ರೀಡಂ ಪಾರ್ಕ್ನಲ್ಲಿ 19ನೇ ದಿನದ ಹೋರಾಟದಲ್ಲಿ ನಿರತರಾಗಿರುವ ಪ್ರತಿಭಟನಾಕಾರರು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್.ಆರ್.ಪಿ ದರಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಎಕರೆಗೆ 20ಸಾವಿರ ನಷ್ಟವಾಗುತ್ತದೆ ಎಂದು ಹೇಳುವ ಕೃಷಿ ಇಲಾಖೆ ವರದಿಯನ್ನು ಸಕ್ಕರೆ ಸಚಿವರು ನೋಡಿಲ್ಲವೆಂದು ಕಾಣುತ್ತದೆ, ಹೆಚ್ಚುವರಿಯಾಗಿ ಟನ್ಗೆ 50ರೂ ನೀಡಲು ಹೊರಡಿಸಿರುವ ಆದೇಶ ವಾಪಸ್ ಪಡೆದು ನ್ಯಾಯಯುತ ಬೆಲೆ ನಿಗದಿ ಮಾಡಲಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಭಿಕ್ಷೆಯ ರೀತಿಯಲ್ಲಿ ದರ ಏರಿಕೆ: ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ 1 ಎಕರೆ ಕಬ್ಬು ಬೆಳೆಯಲು 1 ಲಕ್ಷ 30 ಸಾವಿರ ವೆಚ್ಚವಾಗುತ್ತದೆ. ಎಕರೆಗೆ 40 ಟನ್ ಕಬ್ಬು ಬೆಳೆದ ರೈತನಿಗೆ 20 ಸಾವಿರ ನಷ್ಟವಾಗುತ್ತದೆ, ಎಂದು ಸರ್ಕಾರದ ವರದಿಯಲ್ಲಿ ಹೇಳಲಾಗುತ್ತಿದೆ. ಆದರೆ ಬೆಲೆ ಏರಿಕೆ ಮಾಡುವಾಗ ಭಿಕ್ಷೆಯ ರೀತಿಯಲ್ಲಿ ಏರಿಕೆ ಮಾಡುವುದು ಯಾವ ನ್ಯಾಯ, ಶುಗರ್ ಮಾಫಿಯಾ ಒತ್ತಡದಿಂದ ಹೊರಗೆ ಬಂದು ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲಿ ಎಂದು ಹೇಳಿದರು.
ಚುನಾವಣಾ ನಿಧಿ ಸಂಗ್ರಹ: ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚ, ಲಗಾಣಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದ್ದಾರೆ, ಇದರ ಹಿಂದೆ ದೊಡ್ಡ ಕೈವಾಡ ಇದೆ. ವಾಮಮಾರ್ಗದ ಮೂಲಕ ಚುನಾವಣಾ ನಿಧಿ ಸಂಗ್ರಹ ಸಾಹಸವಾಗಿದೆ. ರೈತರಿಗೆ ಮೋಸ ಮಾಡುತ್ತಾರೆ ಎಂದು ಆಪಾದಿಸುವ ಕಾರ್ಖಾನೆ ಮಾಲೀಕರೇ ನೀಡುವ ಪಾರದರ್ಶಕತೆ ಇಲ್ಲದ ಸಕ್ಕರೆ ಇಳುವರಿ ಹಾಗೂ ರೈತರಿಗೆ ಹಣ ಪಾವತಿ ವರದಿಯನ್ನು ಪಡೆಯಲಾಗಿದೆ ಎಂದು ಹೇಳಿದರು.
ಕೇಂದ್ರ ಕೃಷಿ ಸಚಿವರ ಭೇಟಿ: ಕಬ್ಬಿನಿಂದ ಬರುವ ಯಥನಾಲ್, ಮೊಲಾಸಿಸ್ ಬಗ್ಯಾಸ್, ಮಡ್ಡಿ ,ಸಕ್ಕರೆ ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನ ತಯಾರಿಸುವ ವರದಿಯಲ್ಲಿ ರೈತ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಯಾಕೆ ಇರುವುದಿಲ್ಲ. ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು, ಲೋಕಸಭಾ ಸದಸ್ಯರುಗಳ ನಿಯೋಗ ಇದೆ ತಿಂಗಳ 19 ಮತ್ತು 20 ರಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರು ಆಹಾರ ಸಚಿವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
750 ಹುತಾತ್ಮ ರೈತರಿಗೆ ಶ್ರದ್ಧಾಂಜಲಿ: ನಾಳೆ ಧರಣಿ ಸ್ಥಳದಲ್ಲಿ ದೆಹಲಿ ರೈತ ಹೋರಾಟದಲ್ಲಿ ಮಡಿದ ರೈತರಿಗೆ, ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು ಭಾಗವಹಿಸಿ, ರೈತ ಹೋರಾಟದ 750 ಹುತಾತ್ಮ ರೈತರಿಗೆ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಇಂದಿನ ಪ್ರತಿಭಟನೆಯಲ್ಲಿ, ಪಿ ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಕಿರಗಸೂರ ಶಂಕರ, ಸಿದ್ದೇಶ, ಕೆಂಡಗಣಸ್ವಾಮಿ,ಮಾದಪ್ಪ ವೆಂಕಟೇಶ್, ಮಹದೇವಸ್ವಾಮಿ, ರಾಜು, ಅಂಬಳೆ ಮಂಜುನಾಥ ಮುಂತಾದ ರೈತ ಮುಖಂಡರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ರೌಡಿಶೀಟರ್ ಬೆತ್ತನಗೆರೆ ಶಂಕರನ ಸೇರ್ಪಡೆ ಮಾಡುವ ಮೂಲಕ ನಮ್ಮಿಂದ ತಪ್ಪಾಗಿದೆ: ಸಿದ್ದರಾಜು