ಬೆಂಗಳೂರು: ನಾವು ಗೆಲ್ಲಲಿಕ್ಕೆ ಬಂದವರು, ನಮಗೆ ಸೋಲು ಕ್ಷಣಿಕ, ಮುನ್ನಡೆ ಸತತ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಈ ವ್ಯಾಖ್ಯಾನ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ಚುನಾವಣೆಯಲ್ಲಿ ಸೋಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಂತೋಷ್, ಕಲಿಯುತ್ತೇವೆ ಸೋಲಿನಿಂದ, ಹಿನ್ನಡೆಗಳಿಂದ, ತಪ್ಪುಗಳಿಂದ, ಉತ್ತರಿಸುತ್ತೇವೆ ಟೀಕೆಗಳಿಗೆ, ಕುಹಕಗಳಿಗೆ, ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ. ನಾವು ಇರಲಿಕ್ಕೇ ಬಂದವರು, ಗೆಲ್ಲಲಿಕ್ಕೇ ಬಂದವರು, ನಮಗೆ ಸೋಲು ಕ್ಷಣಿಕ, ಮುನ್ನಡೆ ಸತತ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿ ಸೋಲನ್ನು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ, 12 ತಿಂಗಳಿನೊಳಗೆ 31,000ಕ್ಕೆ ಮತ್ತೆ 10,000 ಸೇರಿಸಿ 41,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಕುಟುಂಬ ಭೇಟಿ; ವಿಶೇಷ ಪೂಜೆ ಸಲ್ಲಿಕೆ
ಕರ್ನಾಟಕ ರಾಜಕೀಯ ರಣರಂಗ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರೆಂಬ ಕುತೂಹಲ ಮತದಾರರು ಮಾತ್ರವಲ್ಲದೇ ರಾಜಕಾರಣಿಗಳಲ್ಲೂ ಇತ್ತು. ರಾಷ್ಟ್ರೀಯ, ಪ್ರಾದೇಶಿಕ ಸೇರಿದಂತೆ ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿದ್ದವು. ನಿರೀಕ್ಷೆಯಂತೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಪ್ರಚಾರ ಕಾರ್ಯ ಅದ್ಧೂರಿಯಾಗಿಯೇ ಇತ್ತು. ರೋಡ್ ಶೋ, ಸ್ಟಾರ್ ಪ್ರಚಾರ, ರ್ಯಾಲಿ ಹೀಗೆ ಮತದಾರರ ಗಮನ ಸೆಳೆದಿತ್ತು. ನಿನ್ನೆ ಮತದಾನದ ಫಲಿತಾಂಶ ಹೊರಬಂದಿತ್ತು. ಅಂತಿಮವಾಗಿ, ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ರಾಜ್ಯದಲ್ಲೀಗ ಕಾಂಗ್ರೆಸ್ ಅಲೆ ಎದ್ದಿದೆ. ಬಿಜೆಪಿ 66 ಸ್ಥಾನ, ಜೆಡಿಎಸ್ 19 ಸ್ಥಾನಗಳಲ್ಲಿ ಗೆದ್ದಿದ್ದರೆ, 135 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ ಸಿಕ್ಕಿದೆ. ಸದ್ಯ ಸಿಎಂ ಖುರ್ಚಿ ಮೇಲೆ ಎಲ್ಲರ ಕಣ್ಣಿದ್ದು, ಮುಂದಿನ ಸಿಎಂ ಡಿಕೆಶಿಯೋ ಅಥವಾ ಸಿದ್ದರಾಮಯ್ಯ ಅವರೋ? ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಅಭ್ಯರ್ಥಿ ಇಂದೇ ಫೈನಲ್; ನಾಳೆ ಹೊಸ ಸಿಎಂ ಪ್ರಮಾಣ ಸಾಧ್ಯತೆ