ಬೆಂಗಳೂರು : ವಲಸಿಗರು ಸೇರಿದಂತೆ ಎಲ್ಲರಿಗೂ ಕಾಂಗ್ರೆಸ್ ಬಾಗಿಲು ಓಪನ್ ಇರುತ್ತದೆ. ಸೋನಿಯಾ, ಖರ್ಗೆ ಮೇಲೆ ನಂಬಿಕೆ ಇಟ್ಟು ಬರಬಹುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮುಕ್ತ ಆಹ್ವಾನ ನೀಡಿದ್ದಾರೆ.
ವಲಸಿಗರಿಗೆ ಡಿಕೆಶಿ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸುತ್ತ, "ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಪಕ್ಷದ ಸಿದ್ಧಾಂತ ನಂಬಿ ಬರುವವರಿಗೆ ಯಾವಾಗಲೂ ಬಾಗಿಲು ಓಪನ್ ಇರುತ್ತದೆ" ಎಂದು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ನಾಯಕ ಅಂತ ಸೀಮಿತ ಮಾಡಬೇಡಿ. ಖರ್ಗೆಯವರ ಭುಜ ಎಷ್ಟು ಅಗಲವಾಗಿದೆಯೋ, ಅದಕ್ಕಿಂತ ದೊಡ್ಡ ಜವಾಬ್ದಾರಿ ಅವರಿಗೆ ನೀಡಲಾಗಿದೆ. ನಮ್ಮಲ್ಲಿ ಚುನಾವಣಾ ಸಮಿತಿ ಇದೆ. ಪ್ರಜಾಪ್ರಭುತ್ವ ಜೀವಂತವಿದೆ. ಕಾಂಗ್ರೆಸ್ ಡಿಸೆಂಬರ್ ನಲ್ಲಿ 50% ಟಿಕೆಟ್ ಘೋಷಣೆ ಮಾಡುವ ಚಿಂತನೆಯಲ್ಲಿದೆ ಎಂದು ತಿಳಿಸಿದರು.
ಸಚಿವ ಭೈರತಿ ಬಸವರಾಜ್ ವಿರುದ್ಧ 15 ಲಕ್ಷ ಲಂಚ ಆರೋಪದ ಬಗ್ಗೆ ಮಾತನಾಡಿ, ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಒಂದು ಕಾರ್ಯಕ್ರಮ. ಭ್ರಷ್ಟಾಚಾರ ಕಾನೂನು ಬಾಹಿರ ಎಂಬುದು ಅವರಿಗೆ ತಿಳಿದಿಲ್ಲ. 40% ಕಮಿಷನ್ ತೆಗೆದುಕೊಂಡು, ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸತೀಶ್ ಜಾರಕಿಹೊಳಿ ಮಾತನಾಡುವುದು ಹೊಸದೇನಲ್ಲ. ಮೂಢನಂಬಿಕೆ ವಿರುದ್ಧ ಇಂಥ ಹೇಳಿಕೆ ನೀಡ್ತಾರೆ. ಸತೀಶ್ ಜಾರಕಿಹೊಳಿ ಕೂಡ ಹಿಂದೂನೇ. ಮಾನವ ಪ್ರಭುತ್ವ ವೇದಿಕೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಅದು ಸತೀಶ್ ಜಾರಕಿಹೊಳಿ ಅವರ ವೈಯಕ್ತಿಕ ಹೇಳಿಕೆ. ಇದಕ್ಕೆ ಅವರೇ ಉತ್ತರ ಕೊಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ನಾಯಕರಿಗೆ ಹಿಂದೂ ಪದವೇ ಅಲರ್ಜಿ: ಜಗದೀಶ್ ಶೆಟ್ಟರ್