ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಗೊಂಡ ಜೆಡಿಎಸ್ ಸದಸ್ಯ ಎಸ್.ಎಲ್. ಧರ್ಮೇಗೌಡ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ತುಳಸಿ ಮುನಿರಾಜುಗೌಡ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನಾಮಪತ್ರ ಸಲ್ಲಿಸಲು ನಿನ್ನೆ ಕೊನೆ ದಿನವಾಗಿತ್ತು. ಉಮೇದುವಾರಿಕೆ ಹಿಂಪಡೆಯಲು ಮಾರ್ಚ್ 8 ರಂದು ಕೊನೆ ದಿನವಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದರಿಂದ ಅಂದು ಅಧಿಕೃತವಾಗಿ ಚುನಾವಣಾಧಿಕಾರಿಗಳು ತುಳಸಿ ಮುನಿರಾಜು ಗೌಡ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಿನ್ನೆ ಮುನಿರಾಜುಗೌಡ ಅವರು ನಾಮಪತ್ರ ಸಲ್ಲಿಸಿದರು. ತುಳಸಿ ಮುನಿರಾಜುಗೌಡ ಅವರು ಮತಗಟ್ಟೆ ಕಾರ್ಯಕರ್ತರಾಗಿ, ಯುವ ಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಗರ ಪಾಲಿಕೆ ಚುನಾವಣೆಯಿಂದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಪಚುನಾವಣೆ ವೇಳೆ ಪಕ್ಷದ ಆಣತಿ ಮೇರೆಗೆ ಮುನಿರತ್ನ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ತುಳಸಿ ಮುನಿರಾಜುಗೌಡ ಅವರಿಗೆ ಅದೃಷ್ಟ ಒಲಿದಿದ್ದು, ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಬಿಜೆಪಿಯ ಈ ನಿರ್ಧಾರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್. ವಿಶ್ವನಾಥ್ ಅವರಿಗೆ ತೀವ್ರ ನಿರಾಸೆಯಾಗಿದೆ. ಜತೆಗೆ ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದ ಶಾಸಕ ಮುನಿರತ್ನ ಅವರಿಗೂ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇನ್ನೂ ಜೀವಂತವಾಗಿಟ್ಟಂತಾಗಿದೆ.
ಇದನ್ನೂ ಓದಿ: ಪರಿಷತ್ ಉಪಚುನಾವಣೆಗೆ ಟಿಕೆಟ್: ಸಿಎಂ ಭೇಟಿಯಾಗಿ ಧನ್ಯವಾದ ಸಲ್ಲಿಸಿದ ತುಳಸಿ ಮುನಿರಾಜುಗೌಡ
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಮುಖಂಡರಾಗಿರುವ ತುಳಸಿ ಮುನಿರಾಜುಗೌಡ ಮೂಲತಃ ಆರ್‌ಎಸ್‌ಎಸ್ ಕಾರ್ಯಕರ್ತ. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಗ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಸೋತಿದ್ದರು. ಆರ್.ಆರ್.ನಗರ ಕ್ಷೇತ್ರದಲ್ಲಿ ಮನಿರತ್ನ ಅವರಿಗೆ ತುಳಸಿ ಮುನಿರಾಜುಗೌಡ ಪ್ರಬಲ ಸ್ಪರ್ಧಿಯಾಗಿದ್ದರು. ಅಲ್ಲದೆ ಮುನಿರತ್ನ ವಿರುದ್ಧ ಅಕ್ರಮ ಮತದಾರರ ಚೀಟಿ ಪ್ರಕರಣವನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಮೆಟ್ಟಿಲೇರಿದ್ದರು.
ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ನಂತರ ಮುನಿರತ್ನ ಅವರಿಗೆ ಟಿಕೆಟ್ ನೀಡಬೇಕಾದ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತುಳಸಿ ಮುನಿರಾಜುಗೌಡ ಅವರ ಮನವೊಲಿಕೆ ಪ್ರಯತ್ನ ಮಾಡಿದ್ದರು. ಉಪಚುನಾವಣೆ ವೇಳೆ ಟಿಕೆಟ್ ನೀಡದ ಕಾರಣಕ್ಕೆ ತುಳಸಿ ಮುನಿರಾಜುಗೌಡ ಮುನಿಸಿಕೊಂಡಿದ್ದರು. ಅಸಮಾಧಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಕರ್ನಾಟಕ ಪ್ರವಾಸೋದ್ಯಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದರು. ಆದರೆ ಅದನ್ನು ತುಳಸಿ ಮುನಿರಾಜುಗೌಡ ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಪಕ್ಷವು ತಮ್ಮ ತ್ಯಾಗವನ್ನು ಪರಿಗಣಿಸಲಿದೆ ಎಂದು ಯಡಿಯೂರಪ್ಪ ಅಶ್ವಾಸನೆ ನೀಡಿದ್ದರು. ಅದರಂತೆ ವಿಧಾನಪರಿಷತ್ ಚುನಾವಣೆಗೆ ಮುನಿರಾಜುಗೌಡಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ವಿಶ್ವನಾಥ್‌ಗೆ ನಿರಾಸೆ: ಈ ಬೆಳವಣಿಗೆಯಿಂದ ವಿಧಾನ ಪರಿಷತ್ ನಾಮಕರಣ ಸದಸ್ಯರಾದ ಕಾರಣ ಸಚಿವ ಸ್ಥಾನ ಪಡೆಯುವ ಅವಕಾಶದಿಂದ ವಂಚಿತರಾಗಿರುವ ಎಚ್. ವಿಶ್ವನಾಥ್ ಅವರಿಗೆ ತೀವ್ರ ನಿರಾಸೆಯಾಗಿದೆ. ನಾಮಕರಣ ಸದಸ್ಯ ಸ್ಥಾನವನ್ನು ಹಿಂಪಡೆದು ವಿಧಾನಸಭೆಯಿಂದ ವಿಧಾನಪರಷತ್‌ಗೆ ತಮ್ಮನ್ನು ಅಭ್ಯರ್ಥಿ ಮಾಡುವಂತೆ ವಿಶ್ವನಾಥ್ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಈ ಮನವಿ ಪುರಸ್ಕರಿಸದೆ ಮುನಿರಾಜುಗೌಡರಿಗೆ ಮಣೆ ಹಾಕಿದೆ.