ಬೆಂಗಳೂರು: ಬಿಬಿಎಂಪಿಯಲ್ಲಿ ಹಿಡಿದಿರುವ ಅಧಿಕಾರ ತಾತ್ಕಾಲಿಕವಾದದ್ದು. ಕೇವಲ ಅಧಿಕಾರ ಹಿಡಿಯುವುದರಿಂದ ಪಕ್ಷ ಸಂಘಟನೆ ಆಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮೈತ್ರಿ ಸರ್ಕಾರ ನೀಡಿದ್ದ ಅನುದಾನ ಕಡಿತ ಮಾಡಿದ ಕ್ರಮ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಇಂದು ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಲ್ಲಿ ರಾಜ್ಯ ಸರ್ಕಾರ ಯಾವ ರೀತಿ ಕೆಲಸ ಮಾಡಿದೆ. ಮುಂದೆ ಬಿಬಿಎಂಪಿಯದ್ದೂ ಅದೇ ಹಣೆಬರಹ ಅಷ್ಟೇ ಎಂದರು.
ಬಿಬಿಎಂಪಿಯಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಡತಗಳಿಗೆ ಬೆಂಕಿ ಇಟ್ಟರು ಎಂದು ಕಿಡಿಕಾರಿದ ಅವರು, ಬೆಂಗಳೂರು ನಗರದ ನಾಗರಿಕರಿಗೆ ಒಳ್ಳೆ ಆಡಳಿತ ಸಿಗುತ್ತದೆ ಎಂದು ಯಾರಾದರೂ ನಿರೀಕ್ಷೆ ಇಟ್ಟುಕೊಂಡಿದ್ದರೆ ಅದು ಭ್ರಮೆ ಎಂದು ಟೀಕಿಸಿದರು.
ಬಿಹಾರ ಪ್ರವಾಹದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಇದು ನರೇಂದ್ರ ಮೋದಿಯವರ ಸರ್ಕಾರ ದ್ವಿಮುಖ ನೀತಿ ತೋರಿಸುತ್ತಿದೆ. ಕರ್ನಾಟಕ ರಾಜ್ಯದ ಜನತೆಗೆ ಯಾವಾಗ ಜ್ಞಾನೋದಯವಾಗುತ್ತದೆ ಎಂಬುದು ಕಾದು ನೋಡಬೇಕು. ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಸುಮಾರು 6 ಲಕ್ಷ ಕುಟುಂಬಗಳು ಬೀದಿಪಾಲಾಗಿವೆ. ಇದು ಮೋದಿಯವರಿಗೆ ಕಣ್ಣಿಗೆ ಕಾರಣಲಿಲ್ಲವೇ?. ಬಿಜೆಪಿ ನಾಯಕರು ಉತ್ತರ ಕೊಡಬೇಕು. ರಾಜ್ಯದ ಬಿಜೆಪಿ ನಾಯಕರಿಗೆ ಸ್ವಾಭಿಮಾನವಿದ್ದರೆ ಚರ್ಚೆ ಮಾಡಲಿ ಎಂದರು.
ಬಳ್ಳಾರಿ ಹಾಗೂ ತುಮಕೂರಿನಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಬ್ಭಾಗದ ಪ್ರಶ್ನೆ ಅಲ್ಲ. ಅಭಿವೃದ್ಧಿ ದೃಷ್ಟಿಯಿಂದ ವೈಜ್ಞಾನಿಕವಾಗಿ ಮಾಡಿಕೊಳ್ಳಬೇಕು. ಯಾವುದೇ ಒತ್ತಡಗಳಿಗೆ ಮಣಿದು ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.