ಬೆಂಗಳೂರು: ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಂತರ ಭುಗಿಲೆದ್ದಿರುವ ಕಾರ್ಯಕರ್ತರ ಆಕ್ರೋಶ ತಣಿಸಲು ರಾಜ್ಯ ಘಟಕಕ್ಕೆ ಅಮಿತ್ ಶಾ ಸೂಚನೆ ನೀಡುತ್ತಿದ್ದಂತೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರ್ ಅಖಾಡಕ್ಕಿಳಿದಿದ್ದಾರೆ. ಇಂದು ಯುವ ಮೋರ್ಚಾ ಪ್ರಮುಖರ ವಿಶೇಷ ಸಭೆ ನಡೆಸಿದ ಅವರು ಕಾರ್ಯಕರ್ತರಲ್ಲಿ ಸಹನೆ ಮೂಡಿಸುವ ಕೆಲಸಕ್ಕೆ ಮುಂದಾದರು.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಯುವ ಮೋರ್ಚಾ ವಿಶೇಷ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಯಿತು. ಕಾರ್ಯಕರ್ತರು ಸಂಯಮ ಕಳೆದುಕೊಂಡು ಹೀಗೆಲ್ಲಾ ಮಾಡಿದ್ದಾರೆ. ಹಾಗಂತ ಅವರ ವಿರುದ್ಧ ಕ್ರಮದಂತಹ ಕೆಲಸಕ್ಕೆ ಯಾರೂ ಹೋಗಬಾರದು, ಅವರೆಲ್ಲರ ಮನವೊಲಿಕೆ ಕಾರ್ಯ ನಡೆಸಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯಬೇಕು ಎಂದು ಯುವ ಮೋರ್ಚಾ ರಾಜ್ಯ ಪದಾಧಿಕಾರಿಗಳಿಗೆ ರಾಜೇಶ್ ಕುಂತೂರ್ ಸಲಹೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಯುವ ಮೋರ್ಚಾ ಪ್ರಭಾರಿಗಳಾದ ಮಹೇಶ್ ಟೆಂಗಿನಕಾಯಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ಸಂದೀಪ್ ಕುಮಾರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಅಜಿತ್ ಹೆಗಡೆ ಬೆಳ್ಳೆಕೇರಿ ಮತ್ತು ಯುವ ಮೋರ್ಚಾ ರಾಜ್ಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಬ್ಯಾರಿಕೇಡ್ ಜಿಗಿಯಲೆತ್ನಿಸಿದ ಪ್ರಿಯಾಂಕಾ ಗಾಂಧಿ