ಬೆಂಗಳೂರು: ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪವನ್ನು ಇನ್ನೂ ಎರಡು ದಿನ ವಿಸ್ತರಿಸುವಂತೆ ಮನವಿ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಕೊಡಿಸಲು ಪಣ ತೊಟ್ಟ ಸರ್ಕಾರ ಮತ್ತೆ ಎರಡು ದಿನ ಸದನ ಮುಂದುವರೆಸುವಂತೆ ಸಭಾಪತಿಗಳಿಗೆ ಪತ್ರ ಬರೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ, ಈ ಸಂಬಂಧ ಸಭಾಪತಿಗಳಾಗಲಿ ಅಥವಾ ಬಿಜೆಪಿ ನಾಯಕರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.
ಕಳೆದ ವಿಧಾನಪರಿಷತ್ ಕಲಾಪ ಮುಂದೂಡಿದ್ದ ಸಭಾಪತಿಗಳ ನಿರ್ಧಾರವನ್ನು ಪ್ರಶ್ನಿಸಿ ಒಂದು ದಿನದ ಅಧಿವೇಶನ ನಡೆಸಲಾಗಿತ್ತು. ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಈ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸದಿರಲಿ ಎಂಬ ಕಾರಣದಿಂದ ಎರಡು ದಿನ ಮುಂಚಿತವಾಗಿಯೇ ಸಭಾಪತಿಗಳಿಗೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಇದೆ.
ಓದಿ: ಬಿಎಂಆರ್‌ಸಿಎಲ್ ಹುದ್ದೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ: ಬೊಮ್ಮಾಯಿ ಭರವಸೆ
ಪತ್ರದ ಮೂಲಕ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಸೂಚಿಸಿದ ಸರ್ಕಾರ, ಪತ್ರದ ಮೂಲಕ ಮತ್ತೆ ಎರಡು ದಿನ ವಿಸ್ತರಿಸಿ, ರಾಜೀನಾಮೆ ಕೊಡಿಸಲು ತೀವ್ರ ಪ್ರಯತ್ನ ನಡೆಸುವ ಯತ್ನಕ್ಕೆ ಬಿಜೆಪಿ ಮುಂದಾಗಿದೆ. ಒಂದು ವೇಳೆ ನಾಳೆ ಸದನ ಮುಕ್ತಾಯ ಮಾಡಿ ಬಿಟ್ಟರೆ, ಬಜೆಟ್ ಕಲಾಪದ ವೇಳೆ ರಾಜೀನಾಮೆ ಕೊಡಬೇಕಾಗುತ್ತದೆ. ಹೀಗಾಗಿ ಈ ಸದನದಲ್ಲೇ ರಾಜೀನಾಮೆ ಕೊಡಿಸಲು ಮುಂದಾಗಿರುವ ಸರ್ಕಾರ ಎರಡು ದಿನ ಮುಂಚಿತವಾಗಿ ಇಂಥದೊಂದು ಪ್ರಯತ್ನಕ್ಕೆ ಯತ್ನಿಸಿದೆ ಎನ್ನಲಾಗುತ್ತಿದೆ.
ಸಭಾಪತಿ ರಾಜೀನಾಮೆ? :
ಈ ಮಧ್ಯೆ ಇಂದು ಸಂಜೆ ಸಭಾಪತಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಇದ್ದು, ಒಂದೊಮ್ಮೆ ಇದು ದೃಢಪಟ್ಟರೆ ಮುಂದಿನ ಪ್ರಕ್ರಿಯೆಗಳು ಏನು ಎಂಬುದನ್ನು ಕಾದು ನೋಡಬೇಕಿದೆ.