ಬೆಂಗಳೂರು: ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಶಾಸಕಿ ಸೌಮ್ಯರೆಡ್ಡಿ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ವಿಧಾನಸೌಧದ ಕಚೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.
ತಮ್ಮ ಮನವಿ ಪತ್ರದಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ನಿನ್ನೆ ಏರ್ಪಡಿಸಿದ ಪ್ರತಿಭಟನೆ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಮೇಲೆ ಶಾಸಕಿ ಸೌಮ್ಯರೆಡ್ಡಿ ಅವರು ಹಲ್ಲೆ ಮಾಡಿದ್ದಾರೆ. ಕರ್ತವ್ಯನಿರತ ಕಾನ್‍ಸ್ಟೇಬಲ್ ಮೇಲೆ ಅವರು ಹಲ್ಲೆ ಮಾಡಿದ್ದನ್ನು ಮಹಿಳಾ ಮೋರ್ಚಾ ರಾಜ್ಯ ಘಟಕವು ಖಂಡಿಸುತ್ತದೆ. ಹಲ್ಲೆ ಮಾಡಿದ ಸೌಮ್ಯ ರೆಡ್ಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಬಿಡದೇ ಸೌಮ್ಯ ರೆಡ್ಡಿ ಅವರು ಉದ್ಧಟತನದಿಂದ ವರ್ತಿಸಿದ್ದಾರೆ. ರಾಜಕೀಯ ನಾಯಕರಿಗೆ ಸಲ್ಲದ ದುರ್ವರ್ತನೆ ಇದಾಗಿದೆ. ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ. ರಾಜ್ಯದ ಮಾಜಿ ಗೃಹ ಸಚಿವರ ಮಗಳಾದ ಸೌಮ್ಯ ರೆಡ್ಡಿ ಅವರು ಇತರರಿಗೆ ಮಾದರಿ ಆಗುವಂತೆ ನಡೆದುಕೊಳ್ಳಬೇಕಿತ್ತು. ಆದರೆ, ಅವರು ದುರ್ವರ್ತನೆ ತೋರಿದ್ದು, ಇದು ಕಾರ್ಯಕರ್ತರನ್ನು ಪ್ರಚೋದಿಸುವಂತಿದೆ ಎಂದು ದೂರಿದ್ದಾರೆ.
ಓದಿ : ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ಎಂಟು ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!
ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆಯೂ ಇದೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದರು.