ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಈ ಫಲಿತಾಂಶವು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಜನಪರ ಆಡಳಿತಕ್ಕೆ ಸಿಕ್ಕ ಮನ್ನಣೆಯಾಗಿದೆ ಎಂದರು.
ಹಂಪಿ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಪಾಲ್ಗೊಳ್ಳಲು ಮಂಗಳವಾರ ಇಲ್ಲಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರು ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋಗಿತ್ತು. ಮತದಾರರು ಅದನ್ನು ಒಪ್ಪಿ ಪಕ್ಷದ ಮೇಲೆ ವಿಶ್ವಾಸವಿಟ್ಟು ಮುನಿರತ್ನ ಮತ್ತು ಡಾ.ರಾಜೇಶ್ ಗೌಡರನ್ನು ಗೆಲ್ಲಿಸಿದ್ದಾರೆ ಎಂದರು.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಸರ್ಕಾರವು ನುಡಿದಂತೆ ನಡೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅದು ಹುಸಿಯಾಗಲು ಬಿಡುವುದಿಲ್ಲ. ಮುಖ್ಯಮಂತ್ರಿ ಅವರು ಹೇಳಿದಂತೆ ಆರು ತಿಂಗಳಲ್ಲಿ ಶಿರಾದ ಮುದಲೂರು ಕೆರೆಗೆ ನೀರು ಹರಿಸಲಾಗುವುದು. ಆ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳಿಗೆ ಶೀಘ್ರವೇ ಚಾಲನೆ ಕೊಡಲಾಗುವುದು. ಅದೇ ರೀತಿ ರಾಜರಾಜೇಶ್ವರಿ ಕ್ಷೇತ್ರದ ಜನತೆಗೂ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಪೈಪೋಟಿ ಇಲ್ಲ:
ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಮೂಲಕ ಒಕ್ಕಲಿಗ ಸಮುದಾಯದ ನಾಯಕರಾಗಿ ಹೊರಹೊಮ್ಮಲು ತಮ್ಮ ಹಾಗೂ ಸಚಿವ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆದಿದೆ ಎಂಬ ವಾದವನ್ನು ಡಾ.ಸಿ.ಎನ್.ಅಶ್ವತ್ಥನಾರಾಯಣ ಸಾರಾ ಸಗಟಾಗಿ ತಳ್ಳಿಹಾಕಿದರು. ಬಿಜೆಪಿ ಜಾತಿ ರಾಜಕಾರಣ ಮಾಡುವ ಪಕ್ಷವಲ್ಲ. ನನ್ನದೂ ಅದೇ ಸಿದ್ದಾಂತ. ನಾನೆಂದೂ ಜಾತಿ ರಾಜಕಾರಣ ಮಾಡಿದವನೂ ಅಲ್ಲ, ಮುಂದೆ ಮಾಡುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಯಾರೇ ಆಗಲಿ ಸಮುದಾಯದ ನಾಯಕರಾಗಿ ಹೊರಹೊಮ್ಮಬೇಕಾದರೆ ನಿಸ್ವಾರ್ಥದಿಂದ ಅವರವರ ಸಮುದಾಯಕ್ಕೆ ಹಾಗೂ ಇಡೀ ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡಬೇಕು. ಕೇವಲ ಬೂಟಾಟಿಕೆ, ಸ್ವಾರ್ಥ ಮತ್ತು ಕುಟುಂಬ ರಾಜಕಾರಣದಿಂದ ಯಾವುದೇ ಸಮುದಾಯಕ್ಕೂ ಒಳ್ಳೆಯದಾಗದು ಎಂದು ಡಿಸಿಎಂ ಹೇಳಿದರು.