ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಆಯಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಹಾಗೂ ಆಯಾ ವಿಭಾಗದ ಸಂಬಂಧಪಟ್ಟ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮೇಲುಸ್ತುವಾರಿ ಜವಾಬ್ದಾರಿ ಕೊಡಲಾಗಿದೆ. ಈ ಕುರಿತ ಸುತ್ತೋಲೆಯನ್ನು ರದ್ದು ಮಾಡಲು ಬಿಜೆಪಿ ಒತ್ತಾಯಿಸಿದೆ.
ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿ ಹಲವಾರು ತಪ್ಪು ನಿರ್ಣಯಗಳನ್ನು ಕೈಗೊಂಡು ಶಿಕ್ಷಕ, ವಿದ್ಯಾರ್ಥಿ, ಪಾಲಕರ ಸಮುದಾಯದಲ್ಲಿ ಗೊಂದಲ ನಿರ್ಮಾಣವಾಗಿದೆ. ಈ ಲೋಪದೋಷಗಳಿಗೆ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಪದವಿ ಪೂರ್ವ ಹಂತದ ಮೇಲುಸ್ತುವಾರಿಯ ಅಧಿಕಾರವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಪರ ಆಯುಕ್ತರಿಗೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ. ಪಿಯು ಶಿಕ್ಷಣ ಮಹತ್ವದ ಕಾಲಘಟ್ಟ. ಗುಣಮಟ್ಟದ ಶಿಕ್ಷಣ ನೀಡಲು ಪ್ರತ್ಯೇಕ ಇಲಾಖೆ ಬೇಕೆಂದು ಈ ಹಿಂದೆ ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಮತ್ತು ವೀರಪ್ಪ ಮೊಯ್ಲಿ ಅವರು ಶಿಕ್ಷಣ ಸಚಿವರಾಗಿದ್ದಾಗ ನಿರ್ಧರಿಸಿ ಅನುಷ್ಠಾನಕ್ಕೆ ತಂದಿದ್ದರು. ಹಲವಾರು ಹೋರಾಟಗಳ ನಂತರ ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗಿತ್ತು ಎಂದು ಸಂಕನೂರು ವಿವರಿಸಿದರು.
ಇದರಿಂದ ರಾಜ್ಯದ ಪಿಯು ಶಿಕ್ಷಣ ದೇಶಕ್ಕೇ ಮಾದರಿಯಾಗಿತ್ತು. ಇತರ ರಾಜ್ಯದವರು ಇಲ್ಲಿಗೆ ಬಂದು ಅಧ್ಯಯನ ಮಾಡಿ ನಮ್ಮ ಮಾದರಿಯನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಆದರೆ, ಇವತ್ತು ನೂತನ ಸರ್ಕಾರ ಬಂದ ಬಳಿಕ ಮಧು ಬಂಗಾರಪ್ಪನವರು ತಮ್ಮ ತಂದೆ ಕೈಗೊಂಡ ನಿರ್ಧಾರವನ್ನೇ ಬದಲಿಸಿದ್ದು ಖೇದಕರ ಎಂದು ತಿಳಿಸಿದರು.
ರಾಜ್ಯದ ಅನುದಾನಿತ ಪ್ರಾಥಮಿಕ, ಪ್ರೌಢ ಮತ್ತಿತರ ಶಿಕ್ಷಣ ಸಂಸ್ಥೆಗಳ 2006ದ ನಂತರ ನೇಮಕ ಆದ ಶಿಕ್ಷಕರು, ಉಪನ್ಯಾಸಕರಿಗೆ ಪಿಂಚಣಿ ಇಲ್ಲ. ಸರ್ಕಾರಿ ಶಿಕ್ಷಕರಿಗೆ ಎನ್‍ಪಿಎಸ್ ಇದೆ. ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರ ವರ್ಗಕ್ಕೆ ವಿಸ್ತರಿಸುವುದಾಗಿ ಕಾಂಗ್ರೆಸ್ಸಿನವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಎನ್‍ಪಿಎಸ್ ರದ್ದು ಮಾಡಿ ಒಪಿಎಸ್ ನೀಡುವ ಕುರಿತು ಸಮಿತಿ ರಚಿಸಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಇದನ್ನು ಕೊಡುವ ಪ್ರಸ್ತಾವವೇ ಇಲ್ಲ. ಸರ್ಕಾರವು ಈ ವಿಚಾರವನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮಧು ಬಂಗಾರಪ್ಪ ಅವರು ವಾರ್ಷಿಕ ಪರೀಕ್ಷೆ ಬಳಿಕ ಎರಡು ಸಪ್ಲಿಮೆಂಟರಿ ಪರೀಕ್ಷೆ ಮಾಡಲು ಸೂಚಿಸಿದ್ದಾರೆ. ಹಿಂದೆ ಒಂದು ಸಪ್ಲಿಮೆಂಟರಿ ಪರೀಕ್ಷೆ ನಡೆಯುತ್ತಿತ್ತು. 3 ಪರೀಕ್ಷೆಗಳು ಮುಗಿಯಲು ನವೆಂಬರ್ 10ರ ವರೆಗೆ ಅವಕಾಶ ಬೇಕು. ಇದರಿಂದ ಬೋಧನಾ ಅವಧಿಯೇ ಸಿಗುವುದಿಲ್ಲ. ಇದರಿಂದ ಶೇ 90 ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಮೊದಲನೇ ಟರ್ಮ್ ಪರೀಕ್ಷೆಯಲ್ಲೇ ಮುಗಿಯಲಿದೆ. ಮಹತ್ವದ ನಿರ್ಣಯ ಕೈಗೊಳ್ಳುವ ಮೊದಲು ಪ್ರಾಂಶುಪಾಲರು, ಉಪನ್ಯಾಸಕರು ಸೇರಿ ಮೇಲ್ಮನೆ ಸದಸ್ಯರ ಜೊತೆ ಚರ್ಚೆ ಮಾಡಬೇಕಿತ್ತು ಎಂದರು.
ಕೋರ್ಟ್ ಸಮಸ್ಯೆ ಇದ್ದ ಕಾರಣ ನಮ್ಮ ಸರ್ಕಾರ ಇದ್ದಾಗ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ. ಕೋರ್ಟ್‍ನಲ್ಲಿದ್ದ ಸಮಸ್ಯೆ ಬಗೆಹರಿಸಿ 13 ಸಾವಿರ ಶಿಕ್ಷಕರಿಗೆ ವರ್ಗಾವಣೆ ಆದೇಶವನ್ನು ಮಧು ಬಂಗಾರಪ್ಪ ಅವರು ನೀಡಿದ್ದಾರೆ. ಇದು ಒಳ್ಳೆಯ ಕೆಲಸ ಎಂದು ಸಂಕನೂರು ಇದೇ ಸಂದರ್ಭದಲ್ಲಿ ಹೇಳಿದರು.
ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ಮಾತನಾಡಿ, 7ನೇ ವೇತನ ಆಯೋಗದ ಅನುಷ್ಠಾನಕ್ಕೆ ಆಗ್ರಹಿಸಿದರು. ನವೆಂಬರ್ನಲ್ಲಿ ಅಂತಿಮ ವರದಿ ಬರಬೇಕಿತ್ತು. ಸಿದ್ದರಾಮಯ್ಯ ಸರ್ಕಾರವು ಪದವೀಧರರ 5ನೇ ಗ್ಯಾರಂಟಿಯತ್ತ ಗಮನ ಕೊಟ್ಟಿಲ್ಲ. ಹಣವಿಲ್ಲದ ಕಾರಣ 7ನೇ ವೇತನ ಆಯೋಗದ ವರದಿಯ ಅವಧಿಯನ್ನು ವಿಸ್ತರಿಸಿದೆ. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ 2015ರ ನಂತರ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ 1995ರ ನಂತರ ಪ್ರಾರಂಭವಾದ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಅನುದಾನಿತ, ಅನುದಾನರಹಿತ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಅವಕಾಶ ವಿಸ್ತರಣೆ