ಬೆಂಗಳೂರು: ಭಾರತ ನೂರು ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿದ ಹಿನ್ನೆಲೆ ರಾಜ್ಯ ಬಿಜೆಪಿಯಿಂದ ನಾಳೆ ಏಕಕಾಲದಲ್ಲಿ ರಾಜ್ಯಾದ್ಯಂತ ಸುದ್ದಿಗೋಷ್ಠಿ ನಡೆಯಲಿದೆ. ರಾಜ್ಯಾದ್ಯಂತ ಬಿಜೆಪಿ ನಾಯಕರು ಮಾಧ್ಯಮಗೋಷ್ಠಿ ನಡೆಸಲಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರೆಸ್ಮೀಟ್ ಮಾಡಿ, ಲಸಿಕೆ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಲಿದ್ದಾರೆ.
ಜಿಲ್ಲಾ ಸಚಿವರು, ಸಂಸದರು, ವೈದ್ಯಕೀಯ ಪ್ರಕೋಷ್ಠದ ಸಂಚಾಲಕರು, ಜಿಲ್ಲಾ ಅಧ್ಯಕ್ಷರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪ್ರೆಸ್ ಮೀಟ್ ಆಯೋಜಿಸಲಿದ್ದಾರೆ. ಲಸಿಕೆ ಕಾರ್ಯಕ್ರಮದಲ್ಲಿ ಮೋದಿ ಸರ್ಕಾರದ ಸಾಧನೆ ಬಿಂಬಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ, ಲಸಿಕೆ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ಮಾಡಿರುವ ಆರೋಪದ ಬಗ್ಗೆ ತಿರುಗೇಟು ನೀಡಲಿದ್ದಾರೆ.
ನೂರು ಕೋಟಿ ಲಸಿಕಾಕರಣ ಸಂಬಂಧ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿ ಸಿಎಂ ಬೊಮ್ಮಾಯಿ ಆದಿಯಾಗಿ ಬಿಜೆಪಿ ನಾಯಕರು, ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೊರೊನಾ ನಿಯಂತ್ರಣ ಮಾಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಭಾರತ ಹಾಗೂ ನಮ್ಮ ಸರ್ಕಾರ ಗೆದ್ದಿದೆ.
ಹಿಟ್ಲರ್ನ ಮಂತ್ರಿ ಗೋಬೆಲ್ಸ್ ನಂತೆ ಒಂದು ಸುಳ್ಳನ್ನು ನೂರು ಬಾರಿ ಸತ್ಯ ಎಂದು ಹೇಳಿ ಜನರ ಕಣ್ಣಿಗೆ ಮಣ್ಣೆರಚುವ ಕಾಂಗ್ರೆಸ್ ಮತ್ತು ವಿಪಕ್ಷಗಳಿಗೆ ಕಾಯಕದ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದು ರವಿ ಟೀಕಿಸಿದ್ದಾರೆ.