ಬೆಂಗಳೂರು : ವಿಧಾನಪರಿಷತ್ಗೆ ಐವರು ಸದಸ್ಯರ ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಪಟ್ಟಿ ಅಂತಿಮಗೊಂಡಿದ್ದು, ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ.
ಹೆಚ್.ವಿಶ್ವನಾಥ್ (ಸಾಹಿತ್ಯ), ಸಾಬಣ್ಣ ತಳವಾರ್ (ಶಿಕ್ಷಣ), ಶಾಂತಾರಾಮ ಸಿದ್ದಿ (ಬುಡಕಟ್ಟು ಜನಾಂಗ), ಭಾರತಿ ಶೆಟ್ಟಿ (ಸಮಾಜಸೇವೆ) ಹಾಗೂ ಸಿ ಪಿ ಯೊಗೇಶ್ವರ್ (ಸಿನಿಮಾ) ಅಂತಿಮವಾಗಿ ಆಯ್ಕೆಯಾಗಿದ್ದಾರೆ.

ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಹೆಚ್.ವಿಶ್ವನಾಥ್ ಅವರಿಗೆ ಕೊಟ್ಟ ಮಾತನ್ನು ಈಡೇರಿಸಿಕೊಂಡಿದ್ದಾರೆ. ಇದರ ಜೊತೆ ಭಾರತಿ ಶೆಟ್ಟಿ ಹಾಗೂ ಸಿ ಪಿ ಯೋಗೇಶ್ವರ್ ಆಯ್ಕೆಯಾಗುವುದರಲ್ಲಿಯೂ ಕೂಡ ಇವರ ಪಾತ್ರ ಪ್ರಮುಖವಾಗಿದೆ.

ಉಳಿದಂತೆ ಶಾಂತರಾಮ್ ಸಿದ್ದಿ ಹಾಗೂ ಸಾಬಣ್ಣ ತಳವಾರ್ ಆಯ್ಕೆ ಹೈಕಮಾಂಡ್ ಸೂಚನೆಯಂತೆ ಆಗಿದೆ. ಹಿಂದುಳಿದ ವರ್ಗದ ಹಾಗೂ ತಳಮಟ್ಟದ ಸಮುದಾಯದವರಿಗೆ ಅವಕಾಶ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.