ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 23 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ನಡೆಸಿದೆ. ಬಾಕಿ 5 ಕ್ಷೇತ್ರಗಳನ್ನು ಎರಡನೇ ಹಂತದಲ್ಲಿ ಅಂತಿಮಗೊಳಿಸಲು ನಿರ್ಧರಿಸಿದೆ.
ಹೌದು, ಬಿಜೆಪಿ ತೆಕ್ಕೆಯಲ್ಲಿರುವ 16 ಕ್ಷೇತ್ರಗಳಲ್ಲಿ 11 ಸಂಸದರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದು, ಐವರು ಹಾಲಿ ಸಂಸದರ ಬದಲಾವಣೆಗೆ ಚಿಂತನೆ ನಡೆದಿದೆ.
ಹಾಲಿ ಸಂಸದರಿಗೆ ಟಿಕೆಟ್ ಪಕ್ಕಾ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಕೆಲ ಸಂಸದರಿಗೆ ಟಿಕೆಟ್ ನೀಡದಿರುವ ಕುರಿತು ಪಕ್ಷದಲ್ಲಿ ಹೊಸ ಪ್ರಸ್ತಾಪವಾಗಿದೆ. ಹಿರಿಯ ನಾಯಕರೇ ಈ ಲಿಸ್ಟ್ನಲ್ಲಿ ಇದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ಹಾಲಿ ಸಚಿವರಾಗಿರುವ ಪ್ರಭಾವಿಗಳು ಕೂಡ ಈ ಲಿಸ್ಟ್ನಲ್ಲಿದ್ದಾರೆ ಎನ್ನಲಾಗ್ತಿದೆ.
ವಿಜಯಪುರ ಲೋಕಸಭಾ ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಮೋದಿ ಸರ್ಕಾರದಲ್ಲಿ ಸಚಿವರಾಗಿ ಈಗ ಮಾಜಿ ಆಗಿರುವ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಗೆ ಟಿಕೆಟ್ ಅನುಮಾನವಾಗಿದೆ. ಸ್ಥಳೀಯ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿ ಹೊಸಬರಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬಂದಿದೆ. ಸಂಸದರಾಗಿ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಕೆಲಸ ಮಾಡಿಲ್ಲ. ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎನ್ನುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗ್ತಿದೆ.
ಇನ್ನು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡಲ್ಲ. ಬರೀ ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷವನ್ನು ಪದೇ ಪದೇ ಮುಜುಗರಕ್ಕೆ ಸಿಲುಕಿಸಲಿದ್ದಾರೆ ಎನ್ನುವ ಮಾತು ಹುಸಿಯಾಗಿದ್ದು, ಮೊದಲ ಹಂತದ ಪಟ್ಟಿಯಲ್ಲೇ ಹೆಗಡೆ ಹೆಸರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿದುಬಂದಿದೆ.
ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
1.ಬೆಂಗಳೂರು ದಕ್ಷಿಣ - ತೇಜಸ್ವಿನಿ ಅನಂತ್ ಕುಮಾರ್ (ಬಿಜೆಪಿ ಕ್ಷೇತ್ರ)
2.ಬೆಂಗಳೂರು ಉತ್ತರ - ಡಿ.ವಿ. ಸದಾನಂದ ಗೌಡ (ಬಿಜೆಪಿ ಕ್ಷೇತ್ರ)
3.ಬೆಂಗಳೂರು ಕೇಂದ್ರ - ಪಿ.ಸಿ.ಮೋಹನ್ (ಬಿಜೆಪಿ ಕ್ಷೇತ್ರ)
4.ಬೆಂಗಳೂರು ಗ್ರಾಮಾಂತರ - ಸಿ.ಪಿ.ಯೋಗೇಶ್ವರ, ತುಳಸಿ ಮುನಿರಾಜು ಗೌಡ, ರುದ್ರೇಶ್, ಮಾಜಿ ಎಂ.ಎಲ್.ಸಿ ಅಶ್ವಥ್ ನಾರಾಯಣ (ಕಾಂಗ್ರೆಸ್ ಕ್ಷೇತ್ರ)
5.ಚಿಕ್ಕಬಳ್ಳಾಪುರ - ಬಿ.ಎನ್.ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು (ಕಾಂಗ್ರೆಸ್ ಕ್ಷೇತ್ರ)
6.ಕೋಲಾರ - ಡಿ.ಎಸ್.ವೀರಯ್ಯ, ಚಿ.ನಾ.ರಾಮು, ನಾರಾಯಣ ಸ್ವಾಮಿ (ಕಾಂಗ್ರೆಸ್ ಕ್ಷೇತ್ರ)
7. ಮೈಸೂರು-ಕೊಡಗು- ಪ್ರತಾಪ್ ಸಿಂಹ (ಬಿಜೆಪಿ ಕ್ಷೇತ್ರ)
8.ತುಮಕೂರು - ಜಿ.ಎಸ್.ಬಸವರಾಜು (ಕಾಂಗ್ರೆಸ್ ಕ್ಷೇತ್ರ)
9.ಚಾಮರಾಜನಗರ - ಎಂ.ಶಿವಣ್ಣ, ವಿ.ಶ್ರೀನಿವಾಸ ಪ್ರಸಾದ್ (ಕಾಂಗ್ರೆಸ್ ಕ್ಷೇತ್ರ)
10.ಚಿತ್ರದುರ್ಗ - ಜನಾರ್ದನ ಸ್ವಾಮಿ (ಕಾಂಗ್ರೆಸ್ ಕ್ಷೇತ್ರ)
11.ಶಿವಮೊಗ್ಗ - ಬಿ.ವೈ.ರಾಘವೇಂದ್ರ (ಬಿಜೆಪಿ ಕ್ಷೇತ್ರ)
12.ದಾವಣಗೆರೆ - ಜಿ.ಎಂ.ಸಿದ್ದೇಶ್ವರ (ಹಾಲಿ ಸಂಸದರ ಬದಲಾವಣೆ ಸಾಧ್ಯತೆ)
13.ಚಿಕ್ಕಮಗಳೂರು - ಉಡುಪಿ - ಶೋಭಾ ಕರಂದ್ಲಾಜೆ (ಬಿಜೆಪಿ ಕ್ಷೇತ್ರ)
14.ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್ (ಬಿಜೆಪಿ ಕ್ಷೇತ್ರ)
15.ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ (ಬಿಜೆಪಿ ಕ್ಷೇತ್ರ)
16.ಚಿಕ್ಕೋಡಿ - ರಮೇಶ್ ಕತ್ತಿ (ಕಾಂಗ್ರೆಸ್ ಕ್ಷೇತ್ರ)
17.ಬೆಳಗಾವಿ - ಸುರೇಶ್ ಅಂಗಡಿ (ಹಾಲಿ ಸಂಸದರ ಬದಲಾವಣೆ ಸಾಧ್ಯತೆ)
18.ಧಾರವಾಡ - ಪ್ರಹ್ಲಾದ್ ಜೋಶಿ (ಬಿಜೆಪಿ ಕ್ಷೇತ್ರ)
19.ಹಾವೇರಿ-ಗದಗ - ಶಿವಕುಮಾರ್ ಉದಾಸಿ (ಹಾಲಿ)
20.ಕೊಪ್ಪಳ - ಸಂಗಣ್ಣ ಕರಡಿ (ಹಾಲಿ ಸಂಸದರ ಬದಲಾವಣೆ ಸಾಧ್ಯತೆ)
21.ಬೀದರ್ - ಭಗವಂತ್ ಖೂಬಾ (ಬಿಜೆಪಿ ಕ್ಷೇತ್ರ)
22.ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್ (ಹಾಲಿ ಸಂಸದರ ಬದಲಾವಣೆ ಸಾಧ್ಯತೆ) ( ಬಿಜೆಪಿ ಕ್ಷೇತ್ರ)
23. ವಿಜಯಪುರ - ರಮೇಶ್ ಜಿಗಜಿಣಗಿ (ಬದಲಾವಣೆ ಸಾಧ್ಯತೆ)
ಜೆಡಿಎಸ್ ತೆಕ್ಕೆಯಲ್ಲಿರುವ ಹಾಸನ, ಮಂಡ್ಯ ಹಾಗೂ ಕಾಂಗ್ರೆಸ್ ತೆಕ್ಕೆಯಲ್ಲಿರುವ ಗುಲ್ಬರ್ಗಾ, ರಾಯಚೂರು ಮತ್ತು ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡನೇ ಹಂತದಲ್ಲಿ ನಡೆಯಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಬಳ್ಳಾರಿ ಹಾಗೂ ರಾಯಚೂರು ಕ್ಷೇತ್ರಗಳ ಟಿಕೆಟ್ ಆಯ್ಕೆಯಲ್ಲಿ ಮಾಜಿ ಸಂಸದ ಶ್ರೀರಾಮುಲು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಅಂತಿಮಗೊಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದು, ಮಂಡ್ಯದಲ್ಲಿ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಡಾ.ಸಿದ್ದರಾಮಯ್ಯ ಅವರನ್ನೇ ಕಣಕ್ಕಿಳಿಸುವ ಆಲೋಚನೆ ಬಿಜೆಪಿ ನಾಯಕರದ್ದಾಗಿದೆ.
ಶತಾಯ ಗತಾಯ ಹಾಲಿ ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕು, ಕಾಂಗ್ರೆಸ್ ಕ್ಷೇತ್ರಗಳಿಗೆ ಕೈ ಹಾಕಬೇಕು ಎನ್ನುವ ಲೆಕ್ಕಾಚಾರದೊಂದಿಗೆ ಬಿಜೆಪಿ ನಾಯಕರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಮೈತ್ರಿಗೆ ಕಮಲ ಶಾಕ್ ಕೊಡುತ್ತಾ, ಕಮಲಕ್ಕೆ ಮೈತ್ರಿಯೇ ಶಾಕ್ ಕೊಡುತ್ತಾ ಎಂದು ಕಾದು ನೋಡಬೇಕಿದೆ.