ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ರಾಜ್ಯ ಭೇಟಿ ರದ್ದಾಗಿದೆ. ಬಿಜೆಪಿ ಕಾರ್ಯಕಾರಿಣಿ ಸಭೆ ಮುಂದೂಡಿಕೆಯಾದ ಹಿನ್ನೆಲೆ ಪ್ರವಾಸ ರದ್ದು ಮಾಡಲಾಗಿದೆ.
ಮಾರ್ಚ್ 13 ರ ಶನಿವಾರ ಕಲಬುರಗಿಯಲ್ಲಿ ನಡೆಯಬೇಕಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಮಾರ್ಚ್ 14 ರಂದು ನಿಗದಿಯಾಗಿದ್ದ ಬಿಜೆಪಿ ವಿಶೇಷ ಸಭೆ ಮುಂದೂಡಿಕೆಯಾಗಿದೆ.
ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಪಕ್ಷದ ಶಾಸಕರೆಲ್ಲ ಬೆಂಗಳೂರಿನಲ್ಲಿ ಇರಲಿದ್ದಾರೆ. ಹಾಗಾಗಿ ಇಂಥ ಸಮಯದಲ್ಲಿ ಎಲ್ಲರೂ ಕಲಬುರಗಿಯಲ್ಲಿ ಸೇರುವುದು ಕಷ್ಟ ಮತ್ತು ಸಿದ್ಧತೆಗೂ ಸಮಸ್ಯೆಯಾಗಲಿದೆ. ಅಲ್ಲದೆ, ವಾರವಿಡೀ ಬೆಂಗಳೂರಿನಲ್ಲಿರುವ ಶಾಸಕರು ವಾರಾಂತ್ಯಕ್ಕಾದರೂ ತವರು ಕ್ಷೇತ್ರಕ್ಕೆ ಭೇಟಿ ನೀಡಬೇಕಾಗಲಿದೆ. ಹಾಗಾಗಿ ಇಂಥ ಸಮಯದಲ್ಲಿ ಕಾರ್ಯಕಾರಿಣಿ ಸಭೆ ಬೇಡ ಎನ್ನುವ ನಿರ್ಧಾರಕ್ಕೆ ಬಂದ ನಾಯಕರು ಸಭೆ ಮುಂದೂಡಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ವಿಶೇಷ ಸಭೆ ಮುಂದೂಡಿಕೆಯಾದ ಕಾರಣ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಮುಂದಿನ ತಿಂಗಳು ಮತ್ತೆ ಸಭೆಗೆ ದಿನಾಂಕ ನಿಗದಿಯಾಗಲಿದ್ದು, ಆಗ ಸಭೆಗೆ ಆಗಮಿಸಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.