ಬೆಂಗಳೂರು:'ಮಾತಾಡ್ ಮಾತಾಡ್ ಕನ್ನಡ' ಅಭಿಯಾನ ಶ್ಲಾಘನೀಯವಾಗಿದ್ದು, ಕನ್ನಡ ರಾಜ್ಯೋತ್ಸವ ಜನತೆ ಸಂಭ್ರಮದಿಂದ ಆಚರಿಸಲು ಅವಕಾಶ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 6.5 ಕೋಟಿಗೂ ಹೆಚ್ಚು ಕನ್ನಡಿಗರಲ್ಲಿ ಕನ್ನಡ ಜಾಗೃತಿ ಮೂಡಿಸಲು ಸಾಮೂಹಿಕವಾಗಿ 3 ಕನ್ನಡ ಗೀತೆಗಳನ್ನು ಹಾಡಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸಚಿವ ಸುನೀಲ್‍ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಕನ್ನಡತನ ಜಾಗೃತಗೊಳಿಸುವ ಮತ್ತು ಕನ್ನಡದ ಬಗ್ಗೆ ವಿಶೇಷ ಅಭಿಮಾನ ಬೆಳೆಸುವ ದೊಡ್ಡ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸುತ್ತದೆ.
ಕೋವಿಡ್ ನಿಯಂತ್ರಣದಲ್ಲಿರಲು ಲಸಿಕೆ ಕಾರಣವಾಗಿದ್ದು,ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಹಾಗಾಗಿ ಗಣೇಶ ಚತುರ್ಥಿ, ದಸರಾ ಆಚರಣೆ ನಂತರ ಈಗ ಕನ್ನಡ ರಾಜ್ಯೋತ್ಸವವನ್ನು ಜನತೆ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸಲು ಅವಕಾಶ ಮಾಡಿಕೊಡುವಂತೆ ಅವರು ಸರ್ಕಾರವನ್ನು ಪಕ್ಷದ ಪರವಾಗಿ ಒತ್ತಾಯಿಸಿದರು.
“ಕಿಸಾನ್ ಸಮ್ಮಾನ್”- ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ:
ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂಪಾಯಿಯನ್ನು ರೈತರಿಗೆ ನೀಡಿದರೆ, ರಾಜ್ಯ ಸರ್ಕಾರವು ಅದಕ್ಕೆ ಪೂರಕವಾಗಿ 4 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಕೇಂದ್ರದಿಂದ 7,103 ಕೋಟಿ ಮತ್ತು ರಾಜ್ಯದಿಂದ 2,849 ಕೋಟಿ ರೂಪಾಯಿ ವಿತರಣೆಯಾಗಿದೆ. ಶೇ 97ರಷ್ಟು ರೈತರ ಖಾತೆಗಳು ಆಧಾರ್ ಲಿಂಕ್ ಆಗಿದ್ದು, ನೇರ ವರ್ಗಾವಣೆ (ಡಿಬಿಟಿ) ಸಾಧ್ಯವಾಗಿದೆ. ಈ ಚಟುವಟಿಕೆಗೆ 2020- 21ನೇ ಸಾಲಿನಲ್ಲಿ ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ ಲಭಿಸಿದೆ ಎಂದು ಸರ್ಕಾರದ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಶೇಕಡಾ 1.5 ರಷ್ಟು ಮಾರುಕಟ್ಟೆ ಶುಲ್ಕ ವಿಧಿಸುತ್ತಿದ್ದವು. ಅದನ್ನು ಶೇಕಡಾ 0.60ಗೆ ಇಳಿಸಲಾಗಿದೆ. 2020ರ ಜನವರಿ 31ಕ್ಕೆ ಇದ್ದ ಮಧ್ಯಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಬಡ್ಡಿ ಮನ್ನಾ ಮಾಡಲಾಗಿದೆ. ಇದರಿಂದ 55,546 ರೈತರಿಗೆ ಅನುಕೂಲವಾಗಿದೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ಕಳೆದ 2 ವರ್ಷಗಳಲ್ಲಿ ಭಾರಿ ಮತ್ತು ಮಧ್ಯಮ ನೀರಾವರಿಗೆ ರಾಜ್ಯದಲ್ಲಿ 33,465 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಇದರಿಂದ 61,147 ಹೆಕ್ಟೇರ್ ಹೆಚ್ಚು ಜಮೀನು ನೀರಾವರಿಗೆ ಒಳಪಟ್ಟಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ 1201.52 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯತ್‍ಗಳಲ್ಲಿ 39,703 ಚದರ ಕಿಮೀ ಪ್ರದೇಶದಲ್ಲಿ ನೀರಾವರಿ ಯೋಜನೆ ಕಾರ್ಯಾನುಷ್ಠಾನ ಮಾಡಲಾಗಿದೆ ಎಂದು ವಿವರಿಸಿದರು.
ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ
ಕೋವಿಡ್ ಬಂದು ಶಾಲಾ ಕಾಲೇಜು ಬಂದ್ ಆಗಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಮತ್ತು ಇತರ ಸೇವಾ ಸೌಲಭ್ಯಕ್ಕೆ ಸಂಬಂಧಿಸಿ ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿಪಡಿಸಿದ್ದು, ಶಿಕ್ಷಕರ ಕಚೇರಿ ಅಲೆದಾಟ ತಪ್ಪಿಸಲಾಗಿದೆ. 100 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ತಲಾ 2 ಕೋಟಿಯಂತೆ 200 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇವೆ ಎಂದರು. ಎಲ್ಲ ಸಮಸ್ಯೆಗಳ ನಡುವೆ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಣಾಮಕಾರಿ ಅನುಷ್ಠಾನ ಮಾಡಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆದಿದೆ. ಕಾಲೇಜುಗಳ 2,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್‍ರೂಂ ಆಗಿ ಪರಿವರ್ತಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳ ಆನ್‍ಲೈನ್ ಕಲಿಕೆಗೆ ಪೂರಕವಾಗಿ 2.65 ಲಕ್ಷ ಲ್ಯಾಪ್‍ಟಾಪ್ ಅಥವಾ ಟ್ಯಾಬ್ಲೆಟ್ ಕೊಡಲಾಗಿದೆ. ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ರಾಜ್ಯದ 150 ಸರಕಾರಿ ಐಟಿಐಗಳನ್ನು ಉನ್ನತೀಕರಣಕ್ಕೆ 4,636 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವ್ಯಾಪಾರಿಗಳಿಗೆ ತಲಾ 10 ಸಾವಿರ ಸಾಲ ಸೌಲಭ್ಯ:
ಪ್ರಧಾನಮಂತ್ರಿಗಳ ಅತ್ಯಂತ ಪ್ರಮುಖ ಯೋಜನೆ ಸ್ವನಿಧಿಯಡಿ ರಾಜ್ಯದಲ್ಲಿ 1.11 ಲಕ್ಷ ಬೀದಿ ವ್ಯಾಪಾರಿಗಳಿಗೆ ತಲಾ 10 ಸಾವಿರದಂತೆ ಸಾಲ ಸೌಲಭ್ಯ ಕೊಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ 2.22 ಲಕ್ಷ ಮನೆಗಳನ್ನು ಈವರೆಗೆ ನಿರ್ಮಿಸಲಾಗಿದೆ. 1,821 ಘೋಷಿತ ಕೊಳಚೆ ಪ್ರದೇಶಗಳಲ್ಲಿ 3.36 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳಡಿ ಕಳೆದ 2 ವರ್ಷಗಳಲ್ಲಿ 10.5 ಲಕ್ಷ ರೋಗಿಗಳಿಗೆ 1,849.64 ಕೋಟಿ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿಯಲ್ಲಿ ಒಟ್ಟು 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಆರಂಭಿಸಲಾಗಿದೆ.
ಕೋವಿಡ್ ಸಂದರ್ಭದಲ್ಲಿ ತಂದೆತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಕುಟುಂಬಗಳ 18 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಬೆಳವಣಿಗೆಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ರೂಪಾಯಿ ನೀಡಲಾಗುತ್ತಿದೆ. ಹೆಣ್ಣು ಮಗುವಿಗೆ 21 ವರ್ಷದ ಬಳಿಕ ಉನ್ನತ ಶಿಕ್ಷಣ, ವಿವಾಹಕ್ಕೆ ಸಂಬಂಧಿಸಿ 1 ಲಕ್ಷ ರೂಪಾಯಿ ನೆರವು ನೀಡಲಾಗಿದೆ ಎಂದರು.
ಬಂಡವಾಳ ಆಕರ್ಷಣೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ
ಬಂಡವಾಳ ಆಕರ್ಷಣೆಯಲ್ಲಿ 2020ರಲ್ಲಿ ರಾಜ್ಯವು ದೇಶಕ್ಕೆ ಮೊದಲ ಸ್ಥಾನ ಪಡೆದಿದೆ. 1.62 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ನೋಂದಣಿಯಾಗಿವೆ. ಏಪ್ರಿಲ್ ಮೇ ತಿಂಗಳಿನಲ್ಲಿ 17,718 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಿದೆ. ಇದರಿಂದ 19,729 ಉದ್ಯೋಗಾವಕಾಶ ಲಭಿಸಿದೆ ಎಂದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ 4762 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ, 2,484 ಕೋಟಿ ವೆಚ್ಚದಲ್ಲಿ 399 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, 35 ಸಾವಿರ ಕೋಟಿಗೂ ಹೆಚ್ಚು ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 1980 ಕಿಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ಸ್ಥಾಪನೆ
ರಾಜ್ಯಗಳ ಸ್ಟಾರ್ಟಪ್ ರ‍್ಯಾಂಕಿಂಗ್‍ನಲ್ಲಿ ಸತತ 2ನೇ ಬಾರಿ ಅತ್ಯುತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ, ನೀತಿ ಆಯೋಗದ ಇನ್ನೋವೇಶನ್ ಇಂಡಿಯಾ ಇಂಡೆಕ್ಸ್ ನಡಿ ಕರ್ನಾಟಕ 2019-20ರಲ್ಲಿ ರಾಜ್ಯವು ಪ್ರಥಮ ಸ್ಥಾನ ಪಡೆದಿದೆ. ನಾವೀನ್ಯತಾ ಪ್ರಾಧಿಕಾರ ಸ್ಥಾಪಿಸಲು ರಾಜ್ಯಕ್ಕೆ ಅನುಮತಿ ಲಭಿಸಿದೆ. ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (ಜ್ಞಾನಸೇತು) ಸ್ಥಾಪಿಸಲಾಗಿದೆ. ಕಲಬುರಗಿ, ಬೀದರ್ನಲ್ಲಿ ವಿಮಾನನಿಲ್ದಾಣ ಪ್ರಾರಂಭಗೊಂಡಿದೆ. ಶಿವಮೊಗ್ಗ, ವಿಜಯಪುರ ವಿಮಾನನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಹಾಸನದಲ್ಲೂ ಗ್ರೀನ್‍ಫೀಲ್ಡ್ ಏರ್ಪೋರ್ಟ್ 190 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಕೃಷಿಕರ ಮಕ್ಕಳಿಗೆ ಸುಮಾರು 1 ಸಾವಿರ ಕೋಟಿ ವೆಚ್ಚದಲ್ಲಿ ಪಿಯುಸಿ, ಪದವಿ ಕಲಿಕೆಗೆ ಸ್ಕಾಲರ್ಶಿಪ್ ಘೋಷಿಸಿದ್ದಾರೆ. ಜೊತೆಗೆ ಹಿರಿಯ ನಾಗರಿಕರು, ವಿಶೇಷ ಚೇತನ ಮಕ್ಕಳು ಮತ್ತು ವಿಧವೆಯರ ಮಾಸಾಶನವನ್ನೂ ಏರಿಸಿದ್ದಾರೆ. ಉಪ ಚುನಾವಣೆ ಅಭಿವೃದ್ಧಿಯ ಹಿನ್ನೆಲೆಯಲ್ಲೇ ನಡೆಯಬೇಕಿತ್ತು.
ಕೇಂದ್ರದ ವಿದೇಶಾಂಗ, ಶಿಕ್ಷಣ, ಕೃಷಿ, ರಕ್ಷಣಾ ನೀತಿ, ದೇಶವನ್ನು ಒಂದು ಉತ್ಪಾದಕಾ ವಲಯವಾಗಿ (ಮ್ಯಾನುಫ್ಯಾಕ್ಚರಿಂಗ್ ಹಬ್) ಪರಿವರ್ತಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಿರುವುದು, ಸಣ್ಣ ಮತ್ತು ಮಧ್ಯಮ ಉತ್ಪಾದನಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ, ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರ ಪ್ಯಾಕೇಜ್, ಜಗತ್ತಿನ ನಾಯಕತ್ವ ವಹಿಸಿರುವುದು, ಈ ಎಲ್ಲ ಸಂಗತಿಗಳ ಚರ್ಚೆ ಉಪ ಚುನಾವಣೆಗೆ ಆಗಬೇಕಿತ್ತು ಎಂದು ತಿಳಿಸಿದರು.