ಬೆಂಗಳೂರು: ನ್ಯಾಯಾಲಯ, ಕಾನೂನು, ಸಂವಿಧಾನಕ್ಕೆ ಗೌರವ ಕೊಡದೇ ಪ್ರತಿಭಟನೆ ನಡೆಸಿ ಸಂವಿಧಾನಕ್ಕೆ ಅಪಚಾರ ಮಾಡುವುದು ನಿಮ್ಮ ಸಂಸ್ಕೃತಿಯೇ ಎಂದು ಕೈ ಕಾರ್ಯಕರ್ತರು, ಡಿಕೆಶಿ ಬೆಂಬಲಿಗರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಎದುರು ಇರುವ ಸರ್ಕಾರಿ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಿಕ್ಷಕರಿಗೆ ಗೌರವ ಸಲ್ಲಿಕೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಂತರ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಸಂಬಂಧ ಈಗಾಗಲೇ ನಾವು ಹೇಳಿಕೆ ನೀಡಿದ್ದೇವೆ. ಈ ದೇಶದಲ್ಲಿ ಐಟಿ, ಸಿಬಿಐ ದಾಳಿಗಳು ನಡೆಯುತ್ತಿರುವ ಘಟನೆ ಇಂದು ನಿನ್ನೆಯದಲ್ಲ. ಹತ್ತಾರು ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿಗಳ ವಿರುದ್ಧ ದಾಳಿ ನಡೆದಿದೆ. ಅವರೆಲ್ಲ ಕಾನೂನು ಹೋರಾಟ ಮಾಡಿ ಹೊರಬಂದಿದ್ದಾರೆ ಎಂದರು.
ಕಾನೂನಿಗೆ ಗೌರವ ನೀಡುವುದು ಇಲ್ಲಿನ ಸಂಸ್ಕೃತಿ, ನಮ್ಮ ಪದ್ಧತಿ. 2017ರಲ್ಲಿ ಐಟಿ ದಾಳಿಯಾಗಿದೆ. ಎರಡು ವರ್ಷ ಪೂರ್ತಿ ತನಿಖೆ ನಡೆಸಿ ಅದರ ಕೆಲಸ ಮಾಡಿದೆ. ಈ ಸಂಬಂಧ ನ್ಯಾಯಾಲಯ ತೀರ್ಪು ಕೊಡಲಿದೆ. ಮುಂದೆ ಅದರದ್ದೇ ಆದ ಕಾನೂನು ಹೋರಾಟ ನಡೆಯಲಿದೆ ಎಂದರು.
ನ್ಯಾಯಾಲಯ, ಕಾನೂನು, ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ ಎನ್ನುವುದು, ಕಲ್ಲು ತೂರಾಟ, ಬೆಂಕಿ ಹಾಕುವುದು ಸೇರಿದಂತೆ ಸಂವಿಧಾನಕ್ಕೆ ಅಪಚಾರ ಮಾಡುವುದು ನಿಮ್ಮ ಸಂಸ್ಕೃತಿಯೇ ಎಂದು ಪ್ರತಿಭಟನಾಕಾರರ ವಿರುದ್ಧ ಕಟೀಲ್ ವಾಗ್ದಾಳಿ ನಡೆಸಿದರು.