ಬೆಂಗಳೂರು: ಕಾಂಗ್ರೆಸ್ಸಿನ ಪಾದಯಾತ್ರೆಯ ವಿರುದ್ಧ ಜನಾಕ್ರೋಶ ಮುಗಿಲುಮುಟ್ಟಿದೆ. ಆ ಪಕ್ಷದ ನೈತಿಕ ದಿವಾಳಿತನ, ಭಂಡತನ ಹಾಗೂ ಭಟ್ಟಂಗಿ ರಾಜಕಾರಣದ ನಗ್ನ ದರ್ಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕಟುಶಬ್ದಗಳಲ್ಲಿ ಟೀಕಿಸಿದರು.
ಅಧಿಕಾರದಾಹಕ್ಕಾಗಿ ನಡೆಸಿದ ಪಾದಯಾತ್ರೆ ಇದೆಂಬ ವಿಚಾರವನ್ನು ರಾಜ್ಯದ ಜನತೆ ವ್ಯಕ್ತಪಡಿಸುತ್ತಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್‌ನ ಹತಾಶೆ ಮತ್ತು ಅಧಿಕಾರ ಲಾಲಸೆಯ ನಿಜಸ್ವರೂಪವು ದೇಶದೆಲ್ಲೆಡೆ ಪ್ರಕಟಗೊಂಡಿದೆ ಎಂದರು.
ಇದನ್ನೂ ಓದಿ: ರಂಗೇರುತ್ತಿರುವ ಯುಪಿ ಚುನಾವಣೆ: ಹಾಡು ಹಾಡಿ ಮತದಾರರ ಸೆಳೆಯುತ್ತಿರುವ ಬಿಜೆಪಿ ಸಂಸದ!
ಸ್ವಾರ್ಥ ಹಾಗೂ ತಮ್ಮ ಪಕ್ಷದ ಮೇಲೆ ಹಿಡಿತ ಸಾಧಿಸಲಿಕ್ಕಾಗಿ ಪಾದಯಾತ್ರೆಯ ನೆಪವೊಡ್ಡಿ ರಾಜ್ಯವ್ಯಾಪಿ ಕೋವಿಡ್ ವ್ಯಾಪಿಸಲು ಕಾಂಗ್ರೆಸ್ ಕಾರಣವಾಗಿದೆ. ಪಾದಯಾತ್ರೆಯಿಂದ ನೊಂದು ತೊಂದರೆ ಅನುಭವಿಸಿದ ಜನತೆ ಕಾಂಗ್ರೆಸ್ಸಿನ ಈ ಕುಟಿಲ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಲು ಇಡೀ ಕಾಂಗ್ರೆಸ್ ನಾಯಕತ್ವ ವಿಫಲವಾಗಿದೆ. ಅಷ್ಟು ಮಾತ್ರ ಅಲ್ಲ, ಇದಕ್ಕಾಗಿ ದೇಶದ ಜನರ ಮುಂದೆ ಕಾಂಗ್ರೆಸ್ ಕ್ಷಮಾಪಣೆ ಕೇಳಬೇಕು ಎಂದು ಕಟೀಲ್ ಆಗ್ರಹಿಸಿದ್ದಾರೆ.
ಕಾನೂನು ಉಲ್ಲಂಘಿಸಿದ ಹಾಗೂ ಕೋವಿಡ್ ವ್ಯಾಪಕವಾಗಿ ಹರಡಲು ಕಾರಣರಾದ ಕಾಂಗ್ರೆಸ್ಸಿಗರ ವಿರುದ್ಧ ರಾಜ್ಯ ಸರ್ಕಾರವು ತೀವ್ರ ಕಾನೂನಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಕಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.