ಬೆಂಗಳೂರು: ದಸರಾದಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪ, ಕಾರ್ಯಕ್ರಮಗಳನ್ನು ಮುಗಿಸಿ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆದರು. ಮನೆ ಬಳಿ ಬಂದಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಕೆಲಕಾಲ ವಿಶ್ರಾಂತಿ ಪಡೆಯಲಿರುವ ಸಿಎಂ ಬಳಿಕ ಅಧಿವೇಶನದ ತಯಾರಿ ಕುರಿತು ಪರಿಶೀಲಿಸಲಿದ್ದಾರೆ. ಸಂಜೆ ವೇಳೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಮೊದಲ ಅಧಿವೇಶನಕ್ಕೆ ಸಜ್ಜಾಗುತ್ತಿರುವ ಬಿಜೆಪಿ ಸರ್ಕಾರ : ನಾಳೆಯಿಂದ ವಿಧಾನಮಂಡಲ ಅಧಿವೇಶನ ಹಿನ್ನೆಲೆ, ಅಧಿವೇಶನ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಸಲಿದ್ದು, ನಾಳೆಯಿಂದ ಶನಿವಾರದವರೆಗೆ ನಡೆಯಲಿರುವ ಅಧಿವೇಶನದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಅಧಿವೇಶನದಲ್ಲಿ ವಿಪಕ್ಷಗಳಿಗೆ ತಕ್ಕ ಉತ್ತರ ಕೊಡುವ ಬಗ್ಗೆ, ಸರ್ಕಾರ ರಚನೆಯಾದ ನಂತರ ಜಾರಿಗೆ ತಂದ ಯೋಜನೆಗಳು, ಸರ್ಕಾರದ ಆರ್ಥಿಕ ಪರಿಸ್ಥಿತಿ, ಪ್ರವಾಹದ ಪರಿಹಾರ ಕಾರ್ಯಗಳು, ಅಭಿವೃದ್ಧಿ ಕಾರ್ಯಗಳು, ರೈತರ ಸಾಲ ಮನ್ನಾ, ರಾಜ್ಯದಲ್ಲಿ ಪ್ರವಾಹ ಆದ ನಂತರ ಆಗಿರುವ ನಷ್ಟ, ಪ್ರವಾಹಕ್ಕೆ ಮಾಡಿರೋ ಪರಿಹಾರ ಕಾರ್ಯಗಳು, ನಿರಾಶ್ರಿತರಿಗೆ ವಸತಿ ಸೌಕರ್ಯಗಳು ಒದಗಿಸಿರುವುದು ಹಾಗೂ ಕೇಂದ್ರ ಸರ್ಕಾರದಿಂದ ಆಗಿರುವ ಕಾರ್ಯಕ್ರಮಗಳು, ಪ್ರವಾಹಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭರಿಸಿರುವ ವೆಚ್ಚದ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.
ಬಳಿಕ ವಿಧಾನಸೌಧದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ, ಸದನ ಕಾರ್ಯಕಲಾಪಗಳ ಬಗ್ಗೆ ಚರ್ಚೆ ನಡೆಯಲಿದೆ. ತಮ್ಮ ಪಕ್ಷದ ಶಾಸಕರೊಂದಿಗೆ ಚರ್ಚಿಸಲಿರುವ ಸಿಎಂ,ಸದನದಲ್ಲಿ ಶಾಸಕರ ನಡೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸದನದಲ್ಲಿ ಕಾಂಗ್ರೆಸ್, ಜೆಡಿಎಸ್ ವಿಪಕ್ಷಗಳು ಪ್ರತಿಭಟನೆ, ಹೋರಾಟಕ್ಕೆ ಸಜ್ಜಾಗಿರುವುದರಿಂದ, ಬಿಜೆಪಿ ಈ ಸಿದ್ಧತೆಯಲ್ಲಿ ತೊಡಗಿದೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿದ್ರೆ ಅವರಿಗೆ ಸರ್ಕಾರದ ಯೋಜನೆಗಳ ಮೂಲಕ ತಿರುಗೇಟು ಕೊಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.