ಚಿಕ್ಕಮಗಳೂರು: ಕಾಂಗ್ರೆಸ್ ವಿರುದ್ಧ ವ್ಯಂಗ್ಯಾತ್ಮಕ ಪೋಸ್ಟರ್ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಸೇರಿದಂತೆ ಐವರು ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರು ನಗರ ಮತ್ತು ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಪೇಸಿಎಂ ಪೋಸ್ಟರ್ ಅಭಿಯಾನದ ಮೂಲಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಮುಜುಗರ ತರಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಬಿಜೆಪಿ ಪೋಸ್ಟರ್ ಸಮರ ಆರಂಭಿಸಿದೆ.
ಚಿಕ್ಕಮಗಳೂರು ನಗರದ ತಾಲೂಕು ಕಚೇರಿ, ಕೆಇಬಿ, ಚಿಕ್ಕಮಗಳೂರು ಉಸ್ತುವಾರಿ ಸಚಿವರ ಕಚೇರಿಗಳ ಮುಂದೆ ಇದು ಫ್ರೀ ಭಾಗ್ಯವಲ್ಲ, ಹಗಲು ದರೋಡೆ ಎಂದು ಪೋಸ್ಟರ್ ಅಂಟಿಸಲಾಗಿದೆ. ವೈಎಸ್ಟಿ ಸಂಗ್ರಹ ಸಮಿತಿಯ ಸುತ್ತೋಲೆ, ಹಲೋ ಅಪ್ಪಾ, ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ಎನ್ನುವ ಪೋಸ್ಟರ್ಗಳನ್ನು ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿ ಇರುವ ಫೋಟೋ ಪೋಸ್ಟರ್ ಅಂಟಿಸಲಾಗಿದೆ.
ಮೈಸೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡುವ ಖುಷಿಯಲ್ಲಿದ್ದರು. ಆದರೆ, ಜನರು ಅವರಿಗೆ ವಿರೋಧ ಪಕ್ಷದಲ್ಲಿ ಕೂರುವಂತೆ ಮಾಡಿದ್ದಾರೆ. ಇದರಿಂದಾಗಿ ಅವರು ಪೋಸ್ಟರ್ ಅಂಟಿಸಿದ್ದಾರೆ ಎಂದರು.
ಇದನ್ನೂ ಓದಿ: ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ, ಅವರಿಗೆ ಶುಭ ಕೋರುತ್ತೇನೆ: ಡಿ ಕೆ ಶಿವಕುಮಾರ್