ಬೆಂಗಳೂರು: ಪದೇ ಪದೇ ಆಡಳಿತ ಪಕ್ಷ ಬಿಜೆಪಿಯ ನಾಯಕರೇ ಕೊರೊನಾ ನಿಯಮಾವಳಿ ಉಲ್ಲಂಘನೆ ಮಾಡುತ್ತಿದ್ದಾರೆ. ಬಿಜೆಪಿಯ ವಿದ್ಯಾವಂತ ವರ್ಗವೇ ಸಾಮಾಜಿಕ ಅಂತರ ಮರೆತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇಂದು ಶಾಂತಿನಗರದಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ. ಸಿಎಂ ಕಾರಿನಿಂದ ಇಳಿಯುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಮುಖಂಡರು ಸಮಾಜಿಕ ಅಂತರ ನಿಯಮ ಮರೆತು ಮುಖ್ಯಮಂತ್ರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಗುಂಪು ಗುಂಪಾಗಿಯೇ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದರು.
ನಾಮಪತ್ರ ಸಲ್ಲಿಕೆ ನಂತರ ಕಚೇರಿಯಿಂದ ಹೊರ ಬಂದ ಸಿಎಂ ಯಡಿಯೂರಪ್ಪ ಅವರು ಅಭ್ಯರ್ಥಿಗಳ ಜೊತೆ ಗುಂಪಿನಲ್ಲಿಯೇ ನಿಂತು ಕಾರ್ಯಕರ್ತರ ಕಡೆ ಕೈ ಬೀಸಿ ವಿಜಯದ ಚಿಹ್ನೆ ತೋರಿದರು.
ಕೊರೊನಾವನ್ನು ಮರೆತ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಕಚೇರಿ ಎದುರು ಜಮಾಹಿಸಿ ಜಮಾಯಿಸಿ ಜಯಘೋಷಗಳನ್ನು ಕೂಗುತ್ತ ಸಾಮಾಜಿಕ ಅಂತರ ಸಂಪೂರ್ಣವಾಗಿ ಮಾಯವಾಗಿತ್ತು.
ಚುನಾವಣೆ ಹುಮ್ಮಸ್ಸಿನಲ್ಲಿ ಶಿಕ್ಷಕ ಹಾಗೂ ಪದವೀಧರ ಸಮುದಾಯವೇ ಈ ರೀತಿ ಕೊರೊನಾವನ್ನು ಮರೆತು ನಿಯಮಾವಳಿ ಉಲ್ಲಂಘಿಸಿದ್ದು, ಸಮಾಜಕ್ಕೆ ಯಾವ ಸಂದೇಶ ಹೋಗಲಿದೆ. ಸುಶಿಕ್ಷಿತರ ಈ ನಡೆಯನ್ನೇ ಇತರರು ಪಾಲಿಸುವುದಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.
ಪದೇ ಪದೇ ಸಾಮಾಜಿಕ ಅಂತರ ಮರೆತ ಬಿಜೆಪಿ:
ಆಡಳಿತ ಪಕ್ಷಕ್ಕೆ ಇದು ಹೊಸತೇನಲ್ಲ, ಬಿಜೆಪಿ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರದ ಸ್ಪಷ್ಟ ಉಲ್ಲಂಘನೆ ಪದೇ ಪದೇ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಬಿಜೆಪಿ ಕಚೇರಿಗೆ ಹೊಸ ಜವಾಬ್ದಾರಿ ಹೊತ್ತು ಬಂದ ಸಿ.ಟಿ ರವಿ ಹಾಗೂ ಸಂಸದ ತೇಜಸ್ವಿ ಸೂರ್ಯ ಕೂಡ ನಿಯಮ ಉಲ್ಲಂಘಿಸಿದ್ದರು. ಕಾರ್ಯಕರ್ತರ ಪಡೆಯನ್ನೇ ಸೇರಿಸಿ ನಿಯಮವನ್ನು ಗಾಳಿಗೆ ತೂರಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಗಳು, ಬೆಂಬಲಿಗರಿಂದ ನಿಯಮದ ಉಲ್ಲಂಘನೆ ಆಗುತ್ತಿದೆ.
ಒಂದು ಕಡೆ ಆಡಳಿತ ಪಕ್ಷದಿಂದ ಕೊರೊನಾ ನಿಯಮ ಉಲ್ಲಂಘನೆ ಮತ್ತೊಂದು ಕಡೆ ಪ್ರತಿಪಕ್ಷದಿಂದ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದೆ. ಆದರೆ ದಂಡವನ್ನು ಮಾತ್ರ ಜನರಿಂದ ಕಟ್ಟಿಸಿಕೊಳ್ಳಲಾಗುತ್ತಿದೆ. ಇನ್ನಾದರೂ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಕೊರೊನಾ ನಿಯಮ ಪಾಲಿಸಿ ಜನರಿಗೂ ಮಾದರಿಯಾಗಬೇಕಿದೆ.