ಬೆಂಗಳೂರು: ಪಾಸಿಟಿವ್ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಬೇಕು, ತೀರಾ ವೈಯಕ್ತಿಕ ವಿಷಯಗಳನ್ನಾಧರಿಸಿ ಟಾರ್ಗೆಟ್ ಮಾಡುವುದು ಬೇಡ ಕೇವಲ ಆಡಳಿತಾತ್ಮಕವಾಗಿ ಟಾರ್ಗೆಟ್ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
ತೀರಾ ವೈಯಕ್ತಿಕ ಟಾರ್ಗೆಟ್ ಬೇಡ : ಖಾಸಗಿ ಹೋಟೆಲ್ ನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಳೆ ಮೈಸೂರು ಭಾಗದ ಅಮಿತ್ ಶಾ ಟಾಸ್ಕ್ ನಲ್ಲಿ ಯಾವುದೇ ವ್ಯತ್ಯಾಸ ಆಗುವಂತಿಲ್ಲ, ಚುನಾವಣಾ ಹಿನ್ನೆಲೆ ಆರಂಭವಾಗುವ ಪಕ್ಷದ ಯಾತ್ರೆ, ಮೋರ್ಚಾ ಸಮಾವೇಶಗಳಲ್ಲಿ ಆದಷ್ಟೂ ಪಾಸಿಟಿವ್ ವಿಷಯಗಳನ್ನು ಇಟ್ಟುಕೊಂಡು ಹೋಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು ಆದಷ್ಟು ತೀರಾ ವೈಯಕ್ತಿಕ ಟಾರ್ಗೆಟ್ ಬೇಡ ಆಡಳಿತಾತ್ಮಕವಾಗಿ ಟಾರ್ಗೆಟ್ ಇರಲಿ, ಹಿಂದೂ - ಮುಸ್ಲಿಂ ಎಂಬ ರೀತಿಯಲ್ಲಿ ಬೇಡ, ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಟಾರ್ಗೆಟ್ ಬೇಡ, ಟಿಪ್ಪು ವಿಚಾರ ಇರಲಿ ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂಬುದನ್ನೂ ಹೇಳಿ ಎಂದು ಸಲಹೆ ನೀಡಿದರು.
ಪ್ರಯತ್ನ ಹಾಕಿದರೆ ಆ ರೆಕಾರ್ಡ್ ಬ್ರೇಕ್ ಮಾಡುವ ಅವಕಾಶ ಇದೆ: ಬೆಂಗಳೂರಿನಲ್ಲಿ ನಮಗೆ ಅತಿ ಹೆಚ್ಚು ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳೂ ಇವೆ, ನಾವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು ಅಷ್ಟೇ, ಸರಿಯಾದ ಪ್ರಯತ್ನ ಮಾಡಿದರೆ ರಿಸಲ್ಟ್ ಖಂಡಿತಾ ಸಿಗಲಿದೆ. ಈ ಹಿಂದೆ ನಾವು 18 ಸೀಟು ಗೆದ್ದಿದ್ದೆವು. ಈ ಬಾರಿ ಪ್ರಯತ್ನ ಹಾಕಿದರೆ ಆ ರೆಕಾರ್ಡ್ ಬ್ರೇಕ್ ಮಾಡುವ ಅವಕಾಶ ಇದೆ. ಬೆಂಗಳೂರಿನಲ್ಲಿ ಕೆಲಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುವ ಮಾಹಿತಿ ನಮಗೆ ಇದೆ. ಬೆಂಗಳೂರಿನ ನೀವೆಲ್ಲರೂ ಸಮರ್ಥರು ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಸೂಚಿಸಿದರು.
ಪ್ರತೀ ದಿನವೂ ಪಕ್ಷದ ಕೆಲಸ ಮಾಡಬೇಕು: ಸಭೆಯಲ್ಲಿ ಮಾತನಾಡಿದ ಮನ್ಸುಕ್ ಮಾಂಡವೀಯ, ಪಕ್ಷದ ಕಾರ್ಯಕ್ರಮಗಳು ಸೂಕ್ತವಾಗಿ ಕಾರ್ಯರೂಪದಲ್ಲಿರಲಿ ಪೇಜ್ ಪ್ರಮುಖ್, ಬೂತ್ ಸಮಿತಿ ಎಲ್ಲವೂ ಆಕ್ಟೀವ್ ಇರಬೇಕು. ಮನೆಯನ್ನು ಒಂದು ಬಾರಿ ಮಾತ್ರ ನಾವು ಗುಡಿಸುವುದಿಲ್ಲ ಪ್ರತೀ ದಿನ ಮನೆ ಗುಡಿಸುವಂತೆ ಪ್ರತೀ ದಿನವೂ ನಾವು ಪಕ್ಷದ ಕೆಲಸ ಮಾಡಬೇಕು ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಲಭ್ಯ, ವಾರ್ಡ್ಗಳಲ್ಲಿ ಸಭೆಗಳು ಆಗಬೇಕು. ಸರ್ಕಾರದ ಯೋಜನೆಗಳು ನಿಯಮಿತವಾಗಿ ತಲುಪಬೇಕು. ನಿಮಗೆ ವಹಿಸಲ್ಪಟ್ಟ ಜವಾಬ್ದಾರಿಗಳು ಕಾಲಮಿತಿಯಲ್ಲಿ ನೆರವೇರಲಿ ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಚುನಾವಣಾ ಸಹ ಉಸ್ತುವಾರಿಗಳಾದ ಮನ್ಸುಕ್ ಮಾಂಡವೀಯ, ಅಣ್ಣಾಮಲೈ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗು ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ತೇಜಸ್ವಿ ಸೂರ್ಯ,ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಬಿಬಿಎಂಪಿ ಮಾಜಿ ಮೇಯರ್ಗಳು ಸೇರಿದಂತೆ 60 ಆಹ್ವಾನಿತರು ಭಾಗಿಯಾಗಿದ್ದರು.
ಇದನ್ನೂ ಓದಿ: ರಂಗ ಪ್ರವೇಶ ಮಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳು: ಪ್ರಧಾನ್ ನೇತೃತ್ವದಲ್ಲಿ ಮಹತ್ವದ ಸಭೆ