ಬೆಂಗಳೂರು : ಪಂಚ ಗ್ಯಾರಂಟಿಗಳಿಗೆ ಬಜೆಟ್ನಲ್ಲಿ ಅಗತ್ಯ ಅನುದಾನ ಇರಿಸಿದ್ದು, ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದೇನೆ. ಐದು ಗ್ಯಾರಂಟಿಗಳೂ ಜಾರಿಯಾಗಲಿದ್ದು, 1.30 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿವೆ. ಜನ ಸಂತೋಷದಿಂದ ಇದ್ದಾರೆ, ನಮ್ಮದು ನುಡಿದಂತೆ ನಡೆದ ಪಕ್ಷವಾದರೆ, ಬಿಜೆಪಿ ಜನರಿಗೆ ದ್ರೋಹ ಮಾಡಿದ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಗೈರಿನ ನಡುವೆ ಉತ್ತರಿಸಿದ ಸಿಎಂ, ಐದು ಗ್ಯಾರಂಟಿಗಳನ್ನ ಬಡವರಿಗಾಗಿ ಜಾರಿಗೆ ತಂದಿದ್ದೇವೆ. ಇವಕ್ಕೆಲ್ಲಾ 52,058 ಕೋಟಿ ವಾರ್ಷಿಕ ವೆಚ್ಚವಾಗಲಿದ್ದು, 35,419 ಕೋಟಿ ಈ ವರ್ಷ ಬೇಕಿದೆ. ಆನೇಕರು ಇದನ್ನು ಎಲ್ಲಿಂದ ತರಲಿದ್ದಾರೆ. ರಾಜ್ಯ ದಿವಾಳಿಯಾಗಲಿದೆ ಎನ್ನುತ್ತಿದ್ದಾರೆ. ತೆರಿಗೆ ಸೋರಿಕೆ ತಡೆದು ಅನೇಕ ಇಲಾಖೆಗೆ ತೆರಿಗೆ ಸಂಗ್ರಹ ಹೆಷ್ಚಳ ಮಾಡಿ ಗುರಿ ನೀಡಿದ್ದೇವೆ. ವಾಣಿಜ್ಯ 4 ಸಾವಿರ ಕೋಟಿ, ಅಬಕಾರಿ 36 ಸಾವಿರ ಕೋಟಿ, ಮುದ್ರಾಂಕದಿಂದ 6 ಸಾವಿರ ಕೋಟಿ, ಮೋಟಾರ್ ವಾಹನದಿಂದ 1 ಸಾವಿರ ಕೋಟಿ, ಗಣಿಗಾರಿಕೆಯಿಂದ 1500 ಕೋಟಿ,ಇತರ ಸಂಪನ್ಮೂಲಗಳಿಂದ 13,500 ಕೋಟಿ 8068 ಕೋಟಿ ಸಾಲದಿಂದ ಸೇರಿ ಒಟ್ಟು 36,653 ಕೋಟಿ ಹೆಚ್ಚುವರಿ ಸಂಗ್ರಹವಾಗಲಿದೆ. ಈ ಬಾರಿಯ ಗ್ಯಾರಂಟಿಗೆ ಬೇಕಾದ ಹಣದ ಕೊರತೆ ಭರಿಸಬಹುದಾಗಿದೆ ಎಂದರು.
ನಾವು ಯಾವಾಗಲೂ ನುಡಿದಂತೆ ನಡೆಯುವವರು, ಬಸವಾದಿ ಶರಣರಂತೆ ನುಡಿದಂತೆ ನಡೆದುಕೊಳ್ಳುತ್ತೇವೆ. 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆವು. 30 ಹೊಸ ಕಾರ್ಯಕ್ರಮ ಮಾಡಿದೆವು, ಬಿಜೆಪಿಯವರು 600 ಭರವಸೆ ನೀಡಿದರು ಅದರಲ್ಲಿ ಶೇ.10 ರಷ್ಟೂ ಈಡೇರಿಸಿಲ್ಲ. ಇವತ್ತು ರಾಜ್ಯದ ಜನ ತೀರ್ಮಾನ ಮಾಡಬೇಕು. ಯಾರು ನುಡಿದಂತೆ ನಡೆದಿದ್ದಾರೆ ಯಾರು ದ್ರೋಹ ಮಾಡಿದ್ದಾರೆ ಎಂದು, ಬಿಜೆಪಿ ಜನರಿಗೆ ದ್ರೋಹ ಮಾಡಿದ ಪಕ್ಷ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಮೂರು ಗ್ಯಾರಂಟಿ ಜಾರಿ : ಈಗಾಗಲೇ ಐದು ಗ್ಯಾರಂಟಿಗಳ ಪೈಕಿ ಮೂರು ಜಾರಿಯಾಗಿವೆ. ಶಕ್ತಿ ಯೋಜನೆಯಡಿ 23 ಕೋಟಿ ಮಹಿಳೆಯರು ಇಲ್ಲಿಯವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರವಾಸಿತಾಣ, ಧಾರ್ಮಿಕ ಸ್ಥಳ ಇತ್ಯಾದಿಗೆ ಜನ ಹೆಚ್ಚು ತೆರಳುತ್ತಿದ್ದು ವಹಿವಾಟು ಹೆಚ್ಚಾಗಿದೆ. ನಿಜವಾದ ಧಾರ್ಮಿಕ ಆಚರಣೆ ನಮ್ಮ ಕಾಲದಲ್ಲಿ ಆಗುತ್ತಿದೆ. ಇವರ ಕಾಲದಲ್ಲಿ ಜಾತ್ರೆಗಳಿಗೆ ಅವರು ಅಂಗಡಿ ಇಡಬಾರದು, ಇರುವ ಅಂಗಡಿ ಇಡಬಾರದು ಎಂದು ತಾರತಮ್ಯ ಮಾಡಿದ್ದರು. ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದು, ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನನಗೆ ನಮ್ಮ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಇದನ್ನು ಸಹಿಸದೆ ಹೊಟ್ಟೆ ಉರಿಯಿಂದ ಸದನದಿಂದ ಹೊರಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಗೃಹಜ್ಯೋತಿ ಯೋಜನೆ ಜುಲೈನಿಂದ ಶುರು ಮಾಡಿದ್ದು, ಆಗಸ್ಟ್ನಲ್ಲಿ ಬರುವ ಬಿಲ್ ನಿಂದ ಅನ್ವಯವಾಗಲಿದೆ. ಇದರಲ್ಲಿಯೂ ಬಿಜೆಪಿಯವರು ತಪ್ಪು ಹುಡುಕಲು ಹೊರಟಿದ್ದಾರೆ. ಎಲ್ಲರಿಗೂ 200 ಯೂನಿಟ್ ಕೊಡಿ ಎನ್ನುತ್ತಿದ್ದಾರೆ, ಹೇಗೆ ಕೊಡಲಾಗುತ್ತದೆ. ವಾರ್ಷಿಕ ಸರಾಸರಿ ಬಳಕೆಗೆ ತಕ್ಕಂತೆ ಶೇ.10 ಹೆಚ್ಚಿಸಿ ಕೊಡಲಾಗಿದೆ ಅದನ್ನೂ ಸಹಿಸುತ್ತಿಲ್ಲ. ಮೂರನೆಯ ಯೋಜನೆ ಅನ್ನ ಭಾಗ್ಯ ತಂದಿದ್ದೇವೆ. ಅದರಂತೆ ಕೇಂದ್ರದ ಐದು ಕೆಜಿ ಜೊತೆ ನಾವು ಐದು ಕೆಜಿ ಕೊಡಬೇಕಿದೆ. ಆದರೆ ಎಫ್ಸಿಐ ಅಕ್ಕಿ ಕೊಡುತ್ತೇವೆ ಎಂದು ನಂತರ ಕೊಡಲಾಗಲ್ಲ ಎಂದರು.
ಬೇರೆ ರಾಜ್ಯಗಳ ಬಳಿಯೂ ನಮಗೆ ಬೇಕಾದ ಪ್ರಮಾಣದ ಅಕ್ಕಿ ಲಭ್ಯವಿಲ್ಲ. ಕೇಂದ್ರದ ಏಜೆನ್ಸಿ ಮೂಲಕ ಪ್ರಯತ್ನ ನಡೆಸಿದರೂ ಅಕ್ಕಿ ಸಿಕ್ಕಿಲ್ಲ. ಹಾಗಾಗಿ ನಾವು ತಾತ್ಕಾಲಿಕ ವ್ಯವಸ್ಥೆಯಾಗಿ ಅಕ್ಕಿ ಸಿಗುವವರೆಗೂ ಪ್ರತಿ ಸದಸ್ಯನಿಗೆ 170 ರೂ.ಗಳ ಡಿಬಿಟಿ ಮೂಲಕ ಪಡಿತರದಾರರಿಗೆ ನೀಡುತ್ತಿದ್ದೇವೆ. ಇಲ್ಲಿಯವರೆಗೂ 57,51,000 ಕುಟುಂಬಗಳ 4.42 ಕೋಟಿ ಕುಟುಂಬಗಳಿಗೆ 137.08 ಕೋಟಿ ಹಣ ಹಾಕಿದ್ದೇವೆ. ಗೃಹಲಕ್ಷ್ಮಿಗೆ 34 ಸಾವಿರ ಕೋಟಿ ಬೇಕು,18 ಸಾವಿರ ಕೋಟಿ ಈ ಬಾರಿ ಬೇಕು. ಆಗಸ್ಟ್ನಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಐದನೇ ಗ್ಯಾರಂಟಿ ಯುವ ನಿಧಿಯಡಿ ಪದವೀಧರರಿಗೆ ಮೂರು ಸಾವಿರ, ಡಿಪ್ಲೊಮಾ ನಿರುದ್ಯೋಗಿಗಳಿಗೆ 1.5 ಸಾವಿರ ಕೊಡುತ್ತೇವೆ. ಕೆಲಸ ಸಿಕ್ಕ ತಕ್ಷಣ ನಿಲ್ಲಿಸುವ ಷರತ್ತಿನಲ್ಲಿ ಗ್ಯಾರಂಟಿ ಜಾರಿ ಮಾಡುತ್ತಿದ್ದೇವೆ. ಇದರಿಂದ ಜನ ಸಂತೋಷದಿಂದ ಇದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ವಿರೋಧ ಪಕ್ಷದಲ್ಲೇ ಇರಬೇಕು : ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ನರೇಂದ್ರ ಮೋದಿಯವರಿಗೆ ಸ್ಕಿಲ್ ಜಾಸ್ತಿ ಇದೆಯಲ್ಲ ಅದಕ್ಕೆ ಉದ್ಯೋಗ ಕೊಡಲಾಗಿಲ್ಲ. ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತದಂತೆ ನಾವು ಬಿಜೆಪಿ ಮುಕ್ತ ಎನ್ನಲ್ಲ. ಬಿಜೆಪಿ ಇರಬೇಕು ಆದರೆ ಯಾವತ್ತು ಅಧಿಕಾರಕ್ಕೆ ಬರಬಾರದು. ವಿರೋಧ ಪಕ್ಷದಲ್ಲೇ ಇರಬೇಕು. ಬೊಮ್ಮಾಯಿ ಧಮ್ಮು, ತಾಕತ್ತು ಎಂದಿದ್ದರು. ಅವರೆಲ್ಲಾ ಈಗ ಎಲ್ಲಿದ್ದಾರೆ ಈಗ ಅವರಲ್ಲಿ ಧಮ್ಮು ಇಲ್ಲ ತಾಕತ್ತು ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಗ್ಯಾರಂಟಿ ಜಾರಿಗೆ ತೊಂದರೆ ಇಲ್ಲ. ಬಜೆಟ್ನಲ್ಲಿ ಅನುದಾನ ಒದಗಿಸಿದ್ದೇನೆ. 2022 ರ ಬಜೆಟ್ಗೆ ಹೋಲಿಸಿದರೆ ಶೇ.23 ರಷ್ಟು ಬಜೆಟ್ ನ ಗಾತ್ರದಲ್ಲಿ ಹೆಚ್ಚಾಗಿದೆ. 62027 ಕೋಟಿ ಅವರ ಹಿಂದಿನ ಬಜೆಟ್ಗೂ ನಮ್ಮ ಬಜೆಟ್ ಗೂ ವ್ಯತ್ಯಾಸವಿದೆ. 2023 ರಲ್ಲಿ ಚುನಾವಣಾ ಬಜೆಟ್ ಮಂಡಿಸಿದ್ದರು. ಅದಕ್ಕೆ ಹೋಲಿಸಿದರೂ 18 ಸಾವಿರ ಹೆಚ್ಚು ಮೊತ್ತದ ಬಜೆಟ್ ಮಂಡಿಸಿದ್ದೇವೆ. ಆದರೆ, ಐದು ಗ್ಯಾರಂಟಿ ಕಾರಣಕ್ಕಾಗಿ ಕೊರತೆ ಬಜೆಟ್ ಮಂಡಿಸಬೇಕಾಯಿತು ಎಂದರು.
ಬಿಜೆಪಿ ಅವರಿಗೆ ಭಯ ಶುರು : ಬಿಜೆಪಿಯವರ ಐದು ವರ್ಷದಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದರೆ 40 ಪರ್ಸೆಂಟ್ ಕಮೀಷನ್ ಅಂತಾ ಅಲ್ಲವೇ? ಇವರು ಕಾರ್ಯಕ್ರಮ ಸರಿಯಾಗಿ ಅನುಷ್ಠಾನಕ್ಕೆ ತರಲಿಲ್ಲ ಎಂದರೆ ಹಣ ಹೊಡೆಸಿದ್ದಾರೆ ಅಂತ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಬಳಿಕ ಬಿಟ್ ಕಾಯಿನ್, ಪಿಎಸ್ಐ ನೇಮಕಾತಿ ಹಗರಣ, ಕೋವಿಡ್ ಖರೀದಿ, ಮೆಡಿಕಲ್ ಕಾಲೇಜು ತನಿಖೆ ಮಾಡಿಸುತ್ತಿದ್ದೇವೆ. ಹಾಗಾಗಿ ಬಿಜೆಪಿ ಅವರಿಗೆ ಭಯ ಶುರುವಾಗಿದೆ. ಆ ಭಯದಿಂದಲೇ ಬಿಜೆಪಿಯವರು ಜನರ ದಾರಿ ತಪ್ಪಿಸಲು ಇದನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ವಿರೋಧ ಪಕ್ಷದವರು ರಾಜ್ಯಕ್ಕೆ ಬಂದಿದ್ದರು. ನಾನು ರಾಜ್ಯ ಅತಿಥಿ ಎಂದು ಪರಿಗಣಿಸಿ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿದ್ದೆ, 2015 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಗೆ ಆಗಮಿಸಿದ್ದ ರಾಷ್ಟ್ರೀಯ ನಾಯಕರಿಗೆ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಮನವಿ ಮೇರೆಗೆ ರಾಜ್ಯ ಅತಿಥಿಗಳಾಗಿ ಪರಿಗಣಿಸಿ ಪ್ರೊಟೊಕಾಲ್ ವ್ಯವಸ್ಥೆ ಮಾಡಿದ್ದೆ, 2018 ರಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದ ರಾಷ್ಟ್ರೀಯ ನಾಯಕರನ್ನು ಸ್ಟೇಜ್ ಗೆಸ್ಟ್ ಮಾಡಲಾಗಿತ್ತು. ಏನೂ ಅಲ್ಲದ ಡ್ಯಾನಿಷ್ ಅಲಿಗೂ ಐಎಎಸ್ ಅಧಿಕಾರಿ ಕಳಿಸಲಾಗಿತ್ತು. ಆಗ ಬಿಜೆಪಿಯವರು ಎಲ್ಲಿ ಹೋಗಿದ್ದರು?
ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪರಿಯವರನ್ನೇ ಕರೆಯಲಿಲ್ಲ. ಇವರು ಶಿಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಯಾರಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲವೋ, ಸಂಪ್ರದಾಯ ಇಲ್ಲವೋ ಅವರು ನಮಗೆ ಸಂಸ್ಕೃತಿಯ ಪಾಠ ಮಾಡುತ್ತಾರೆ. ಸ್ಪೀಕರ್ ಪೀಠಕ್ಕೂ ಗೌರವ ನೀಡದೇ ಹೋರಾಟ ಮಾಡಿದರು. ಒಂದು ಕಾಳು ಅಕ್ಕಿ ಕಡಿಮೆಯಾದರೂ ಹೋರಾಟ ಮಾಡುತ್ತೇನೆ ಎಂದಿದ್ದ ಬಿ.ಎಸ್ ಯಡಿಯೂರಪ್ಪ ಅನ್ನಭಾಗ್ಯದಡಿಯ ಏಳು ಕೆಜಿ ಉಚಿತ ಅಕ್ಕಿಯನ್ನು ಐದು ಕೆಜಿಗೆ ಇಳಿಸಿದ್ದರು ಇವರಿಗೆ ನೈತಿಕತೆ ಇಲ್ಲ.
ಪ್ರತಿಪಕ್ಷದವರು ಇದ್ದಿದ್ದರೆ ಇನ್ನು ಹೇಳುವುದಿತ್ತು. ಆದರೆ ಅವರಿಲ್ಲದ ಕಾರಣ ಉತ್ಸಾಹ ಕಡಿಮೆಯಾಗಿದೆ. ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕರು, ರೈತರರ ಎಲ್ಲರೊಗೂ ನ್ಯಾಯವೊದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಜನಪರ, ಅಭಿವೃದ್ಧಿ, ಸರ್ವತೋಮುಖ ಏಳಿಗೆ, ದೂರದೃಷ್ಟಿ, ರಾಜ್ಯದ ಆರ್ಥಿಕ ಸ್ಥಿತಿಯ ಅಭಿವೃದ್ಧಿಗೆ ಹಾಗೂ ರಾಜ್ಯದ ಬೆಳವಣಿಗೆಗೆ ಪೂರಕವಾದ ಬಜೆಟ್ ಮಂಡಿಸಿದ್ದೇವೆ. ಇದಕ್ಕೆ ಸದನ ಸಹಮತ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನಮ್ಮನೆ : ಬಿಜೆಪಿ ಸದಸ್ಯ ವಿಶ್ವನಾಥ್ ಮಾತನಾಡಿ, ಪಾಪ ನಮ್ಮ ಪಕ್ಷದವರು ರಾಮ ರಾಮ ರಾಮ ಎಂದರು. ಆ ರಾಮನ ನೋಡಲು ಸಿದ್ದರಾಮಯ್ಯ ಫ್ರೀಯಾಗಿ ಬಸ್ ಕೊಟ್ಟಿದ್ದಾರೆ. ನಾನು ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನಮ್ಮನೆ ಎಂದು ಈಗ ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ನನ್ನ ಮನೆ. ಈ ಬಜೆಟ್ ಕಾರ್ಯಕ್ರಮ, ಸರ್ಕಾರದ ಬದ್ದತೆ ನೋಡಿ ನನಗೆ ಖುಷಿಯಾಗಿದೆ. ಇಲ್ಲಿ ಬ್ಯಾಂಡ್ ಸೆಟ್ ಇಲ್ಲ. ಇದ್ದಿದ್ದರೆ ಡ್ಯಾನ್ಸ್ ಮಾಡುತ್ತಿದ್ದೆ ಎನ್ನುತ್ತಾ ಬಿಜೆಪಿ ಪರವಾಗಿ ಧನವಿನಿಯೋಗ ವಿಧೇಯಕವನ್ನು ಸ್ವಾಗತ ಮಾಡಲಿದ್ದೇನೆ ಎಂದರು. ಇದಕ್ಕೆ ಸಭಾಪತಿ ಹೊರಟ್ಟಿ ಹೊರಗೆ ಹೋಗಿ ಮಾಡಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಧನವಿನಿಯೋಗ ವಿಧೇಯಕ ಅಂಗೀಕಾರ : ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಧನವಿನಿಯೋಗ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಮಂಡಿಸಿದರು. ಶಿಕ್ಷಕರ ಖಾಲಿ ಹುದ್ದೆ ಭರ್ತಿ, ಅತಿಥಿ ಉಪನ್ಯಾಸಕರ ಸೇವಾಭದ್ರತೆ, ಮಹಾರಾಣಿ ಕಾಲೇಜಿನ ಹೆರಿಟೇಜ್ ಕಟ್ಟಡದ ಕುರಿತು ಕ್ರಮ ಮನವಿ ಬಂದಿದೆ. ಅದರಂತೆ ಹಂತ ಹಂತವಾಗಿ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುತ್ತದೆ. ಕುಡಿಯುವ ನೀರಿಗೆ ಎಷ್ಟೇ ಹಣ ಬೇಕಾದರೂ ಕೊಡಲಿದ್ದೇವೆ.
ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲಿದ್ದೇವೆ. ಅತಿಥಿ ಉಪನ್ಯಾಸಕರ ಸೇವಾಭದ್ರತೆ, ಸೈಕಲ್ ವಿತರಣೆ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿ ವಿಧೇಯಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಧನವಿನಿಯೋಗ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.
ಇದನ್ನೂ ಓದಿ : ಬೆಲೆ ಏರಿಕೆಗೆ ಮಿಸ್ಟರ್ ಮೋದಿ ಕಾರಣ, ದೇಶವನ್ನು ದಿವಾಳಿಯತ್ತ ತಂದಿದ್ದೇ ವಿಶ್ವಗುರು: ಸಿದ್ದರಾಮಯ್ಯ