ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವ ಆಚರಣೆಯ ಅಂಗವಾಗಿ ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿದ್ದು, ಅದಕ್ಕಾಗಿ ತ್ರಿವರ್ಣ ಧ್ವಜ ಮಾರಾಟ ಮಾಡಲು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಳಿಗೆ ತೆರೆಯಲಾಗಿದೆ.
ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಇಂದು "ಹರ್ ಘರ್ ತಿರಂಗಾ” ಮಳಿಗೆಯನ್ನು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಧಾನಮಂತ್ರಿ ಕರೆಕೊಟ್ಟ ಬಳಿಕ ಪಕ್ಷದ ರವಿಕುಮಾರ್ ಅವರನ್ನು ಸಂಚಾಲಕರನ್ನಾಗಿ ಮಾಡಿ ಈ ಕಾರ್ಯಕ್ರಮದ ಯಶಸ್ಸಿಗೆ ಸೂಚಿಸಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಇದೇ 9ರಿಂದ 15ರವರೆಗೆ ಆಯೋಜಿಸಿ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು. ಪ್ರತಿ ತ್ರಿವರ್ಣ ಧ್ವಜಕ್ಕೆ 25ರೂ. ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ : ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಆಗಸ್ಟ್ 13ರಿಂದ 15ರವರೆಗೆ ರಾಜ್ಯದೆಲ್ಲೆಡೆ ಮತ್ತು ದೇಶಾದ್ಯಂತ ಮನೆಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಆ. 13ರ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸುವುದು ಹಾಗೂ 15ರಂದು ಸಂಜೆ ಧ್ವಜವನ್ನು ಇಳಿಸಲು ನಿರ್ಧರಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು (ಆಜಾದಿ ಕಾ ಅಮೃತ ಮಹೋತ್ಸವ್) ಸಂಭ್ರಮದಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕರೆ ಕೊಟ್ಟಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದೇ ರೀತಿಯಲ್ಲಿ ಬಿಜೆಪಿ ಕೂಡ ಸರ್ಕಾರದ ಕರೆಗೆ ಓಗೊಟ್ಟು ನಮ್ಮ ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಇದಕ್ಕೆ ಸಿದ್ಧಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ನಮ್ಮೆಲ್ಲ ಕಾರ್ಯಕರ್ತರು ಮತ್ತು ಸಾರ್ವಜನಿಕರು ರಾಷ್ಟ್ರಧ್ವಜ ಖರೀದಿಸಿ ತಮ್ಮ ಮನೆ ಮೇಲೆ ಹಾರಿಸಬೇಕು. ಆ ಹಿನ್ನೆಲೆಯಲ್ಲಿ ರಾಜ್ಯದ ಪಕ್ಷದ ಎಲ್ಲ 39 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ದೇಶಭಕ್ತಿಯ ಪಥಸಂಚಲನ “ಪ್ರಭಾತ್ ಫೇರಿ” : 9ರಿಂದ 15ರವರೆಗೆ ನಮ್ಮೆಲ್ಲ ಬೂತ್, ಹೋಬಳಿ, ತಾಲೂಕು ಕೇಂದ್ರಗಳಲ್ಲಿ ನೂರಾರು- ಸಾವಿರಾರು ಜನರು ಸೇರಿ ದೇಶಭಕ್ತಿಯ ಪಥಸಂಚಲನ “ಪ್ರಭಾತ್ ಫೇರಿ” ಮಾಡಬೇಕು. ಇದರಲ್ಲಿ ದೇಶಭಕ್ತಿ ಗೀತೆ, ವಂದೇ ಮಾತರಂ ಮತ್ತಿತರ ಗೀತೆಗಳನ್ನು ಹಾಡಲಾಗುವುದು. ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ, ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಯನ್ನು ನಾಡು- ದೇಶಕ್ಕೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಚೀನಾ ಧ್ವಜ ಬಳಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಇದಕ್ಕೆ ನಾವೇ ಸ್ಟಿಚ್ ಮಾಡಿಸ್ತಿದ್ದೇವೆ. ಫ್ಲಾಗ್ ಹೋಸ್ಟಿಂಗ್ ಅಮೇಂಡ್‌ಮೆಂಟ್ ಮಾಡಲಾಗಿದೆ. ಚೀನಾದಿಂದ ತಂದ ಧ್ವಜ ಮಾರಾಟ ಮಾಡುತ್ತಿಲ್ಲ. ನಾವೇ ಟೈಲರ್ ಬಳಸಿ, ಸ್ಟಿಚ್ ಮಾಡಿಸಿ ಮಾರಾಟ ಮಾಡಲಾಗ್ತಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿ ಧ್ವಜ ತಯಾರಾಗ್ತಿದೆ. ವಿಶೇಷವಾಗಿ ಖಾದಿ, ನಮ್ಮ ದೇಶದ ಕಾಟನ್‌ಗೆ ಹೆಚ್ಚು ಉತ್ತೇಜನ ನೀಡುತ್ತಿದ್ದೇವೆ ಎಂದು ಹೇಳಿದರು.
ಆರ್.ಎಸ್.ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜದ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಅರ್ಧ ಬುದ್ಧಿ ಇದೆ. ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಿಂದಿನಿಂದಲೂ ಹಾರಿಸಲಾಗುತ್ತಿದೆ. ರಾಷ್ಟ್ರ ಧ್ವಜ ಎಲ್ಲರೂ ಒಪ್ಪಿರೋದ್ರಿಂದ ಹಾರಿಸಲಾಗ್ತಿದೆ. ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಸುವ ಕೆಲಸವನ್ನೂ ಮಾಡಲಿದ್ದೇವೆ ಎಂದರು.
ಓದಿ : ರಾಜ್ಯ ಸರ್ಕಾರವನ್ನು ಗವರ್ನರ್ ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಿ: ಬಿ ಕೆ ಹರಿಪ್ರಸಾದ್