ಬೆಂಗಳೂರು: ತಮಿಳುನಾಡಿನಲ್ಲಿ ಬಿಜೆಪಿ ಎರಡಂಕಿ ಮುಟ್ಟುವಲ್ಲಿ ಸಫಲವಾಗಲಿದ್ದು, ಮತ್ತೊಮ್ಮೆ ಡಿಎಂಕೆ ಅಧಿಕಾರಕ್ಕೆ ಬರುವ ಕನಸು ಹುಸಿಯಾಗಲಿದೆ. ಎಐಎಡಿಎಂಕೆ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅಣ್ಣಾಮಲೈ, ಖುಷ್ಬು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಭವಿಷ್ಯದ ಬೆಳವಣಿಗೆಗೆ ಬೇಕಾದ ಫಲಿತಾಂಶ ಲಭ್ಯವಾಗಲಿದೆ. ಡಿಎಂಕೆ ಮೈತ್ರಿಗಿಂತ ನಮ್ಮ ಮೈತ್ರಿ ಉತ್ತಮವಾಗಿದೆ. ಜನರಿಗೆ 10 ವರ್ಷದ ಹಿಂದಿನ ಡಿಎಂಕೆ ಗೂಂಡಾ ರಾಜ್ಯದ ನೆನಪು ಸಾಕಾಗಿದೆ ಅವರಿಗೆ ಯಾರು ಮತ ಹಾಕುವುದಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ಮೌಲ್ಯ ಇಟ್ಟುಕೊಂಡಿರುವ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿ ಕೂಟ ಬೇಕಾ? ಅಥವಾ ಭ್ರಷ್ಟಾಚಾರ, ಭೂಕಬಳಿಕೆ, ಗೂಂಡಾ ಚಟುವಟಿಕೆ, ಮಾಫಿಯಾಗಳು ಬೇಕಾ? ಎನ್ನುವ ಪ್ರಶ್ನೆ ಮುಂದಿಡುತ್ತಿದ್ದೇವೆ. ಅಲ್ಲಿನ ಜನರು ಮಾಫಿಯಾ ರಾಜ್ಯ ಬೇಡ ಎನ್ನುತ್ತಿದ್ದಾರೆ. ಹಾಗಾಗಿ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರಕ್ಕೆ ಶ್ರೀಲಂಕಾದ ಸೀತಾ ಮಂದಿರದ ಕಲ್ಲು
ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಗಣನೀಯ ಸಾಧನೆ ಮಾಡಲಿದೆ. ನಾವು ಎರಡಂಕಿ ಮುಟ್ಟುತ್ತೇವೆ, 234 ಕ್ಷೇತ್ರಗಳೂ ನಮ್ಮ ಕ್ಷೇತ್ರಗಳೇ ಆಗಿವೆ, ಬಿಜೆಪಿ ನೇರವಾಗಿ ಸ್ಪರ್ಧೆ ಮಾಡಿರಲಿ ಅಥವಾ ಎಐಎಡಿಎಂಕೆ ಸೇರಿ ಮಿತ್ರಪಕ್ಷಗಳು ಸ್ಪರ್ಧೆ ಮಾಡಿರಲಿ ಅವರೆಲ್ಲ ನಮ್ಮ ಅಭ್ಯರ್ಥಿಗಳೇ ಅವರನ್ನು ಗೆಲ್ಲಿಸಲು ಬಿಜೆಪಿ ಶ್ರಮಿಸಲಿದೆ.ನಮ್ಮ ಚಿನ್ಹೆಯಡಿ 20 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅವರ ಗೆಲುವಿಗೆ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. ಒಳ್ಳೆಯ ಅಭ್ಯರ್ಥಿ ನಿಲ್ಲಿಸಿದ್ದೇವೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಇದರ ಲಾಭ ಪಕ್ಷಕ್ಕೆ ಆಗಲಿದೆ ಎಂದು ಹೇಳಿದ್ದಾರೆ.
2016 ರಲ್ಲಿ ನಾವು ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂದು ಡಿಎಂಕೆ ನಾಯಕರು ಶ್ಯಾಡೋ ಕ್ಯಾಬಿನೆಟ್ ಮಾಡಿಕೊಂಡಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೆ ತಯಾರಾಗಿದ್ದರು. ಈಗಲೂ ಕೂಡ ಅಧಿಕಾರಕ್ಕೆ ಬರುತ್ತೇವೆ ಎಂದು ಖಾತೆಗಳ ಹಂಚಿಕೆ ನಡೆಯುತ್ತಿದೆ. ಆದರೆ, ಮತದಾರ ಸೂಕ್ಷ್ಮನಿದ್ದಾನೆ, ಅವರ ನಿಲುವೇ ಬೇರೆಯಾಗಲಿದೆ, ಡಿಎಂಕೆ ಈ ಬಾರಿಯೂ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ.