ಬೆಂಗಳೂರು: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಅವರ ಮನೆಯಲ್ಲಿ ನೂರಾರು ಕೋಟಿ ರೂ.ಗೂ ಹೆಚ್ಚು ಅಕ್ರಮ ನಗದು ಲಭಿಸಿದ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾಕೆ ಬಾಯಿ ಬಿಡುತ್ತಿಲ್ಲ?, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾಕಿನ್ನೂ ಪತ್ರಿಕಾಗೋಷ್ಠಿ ಮಾಡಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ನೈತಿಕತೆ ಇದ್ದರೆ, ರಾಹುಲ್ ಗಾಂಧಿಯವರಿಗೆ ಸಂವಿಧಾನದ ಕುರಿತು ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಯಾ ಪೈಸೆ ಗೌರವ ಇದ್ದರೆ ಕೂಡಲೇ ಸುದ್ದಿಗೋಷ್ಠಿ ಕರೆದು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಅಲ್ಲದೆ, ರಾಹುಲ್ ಗಾಂಧಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದರು.
ಅಕಸ್ಮಾತ್ ಬಿಜೆಪಿಯವರು ಸಿಕ್ಕಿಬಿದ್ದಿದ್ದರೆ ಇಷ್ಟೊತ್ತಿಗೆ ಆಕಾಶವೇ ಕೆಳಗೆ ಬಿದ್ದಿದೆಯೇನೋ ಎಂಬಂತೆ ಗಲಾಟೆ ಮಾಡುತ್ತಿದ್ದರು. ಕೆಂಪಣ್ಣ ಶೇ.40 ಕಮಿಷನ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದು, ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ಸಿಗರು ಆಗ್ರಹಿಸಿದ್ದರು. ಈಗ ಇವರ ನಿಲುವೇನು ಎಂದು ಕೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ಕುರಿತು ಮಾತನಾಡಲು ಗುಲಗಂಜಿಯಷ್ಟೂ ನೈತಿಕತೆ ಇಲ್ಲ. ಇದಿಷ್ಟೇ ಅಲ್ಲ, ತೆಲಂಗಾಣದ ಚುನಾವಣೆ ವೇಳೆ ಒಂದೆಡೆ ಕಾಂಗ್ರೆಸ್ ಪಕ್ಷದ 6 ಕೋಟಿ ರೂ ಸಿಕ್ಕಿದೆ. ಐಟಿ ದಾಳಿಯಲ್ಲಿ ಕರ್ನಾಟಕದಲ್ಲಿ ಒಂದು ಮನೆಯಲ್ಲಿ 42 ಕೋಟಿ ರೂ ಸೇರಿ ಒಟ್ಟು 102 ಕೋಟಿ ನಗದು ಪತ್ತೆಯಾಗಿತ್ತು. ಇನ್ನೂ ಕೂಡ ಕಾಂಗ್ರೆಸ್ಸಿಗರು ಪ್ರಾಮಾಣಿಕತೆಯ ಕುರಿತು ಮಾತನಾಡುತ್ತಿದ್ದಾರೆ ಎಂದು ರವಿಕುಮಾರ್ ವ್ಯಂಗ್ಯವಾಡಿದರು.
ಡಿಸೆಂಬರ್ 6ರಂದು ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನಾಯಕ, 2010ರಿಂದ ರಾಜ್ಯಸಭಾ ಸದಸ್ಯರಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಪ್ತವಲಯದಲ್ಲಿರುವ ಧೀರಜ್ ಪ್ರಸಾದ್ ಸಾಹು ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ 300 ಕೋಟಿಗೂ ಹೆಚ್ಚು ನಗದು ಲಭಿಸಿದೆ ಎಂದು ಆರೋಪಿಸಿದ ರವಿಕುಮಾರ್, ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋತ ಅಭ್ಯರ್ಥಿ. ಆದರೆ, ಸೋನಿಯಾ, ರಾಹುಲ್ ಅವರಿಗೆ ಅತ್ಯಂತ ಆಪ್ತರು ಎಂದು ಟೀಕಿಸಿದರು.
ದೇಶದಲ್ಲಿ ಐಟಿ, ಇತರ ಏಜೆನ್ಸಿಗಳ ದಾಳಿ ಆದಾಗ ಇಷ್ಟು ದೊಡ್ಡ ಮೊತ್ತದ ನಗದು ಬೇರೆಲ್ಲೂ ಸಿಕ್ಕಿರಲಿಲ್ಲ. ನಿನ್ನೆ 220 ಕೋಟಿ, 240 ಕೋಟಿ ಎನ್ನಲಾಗಿತ್ತು. ಈಗ 300 ಕೋಟಿಗೂ ಹೆಚ್ಚು ನಗದು ಎಂದು ಟಿವಿಗಳಲ್ಲಿ ಬರುತ್ತಿದೆ. 4 ಹಣ ಎಣಿಕೆ ಯಂತ್ರಗಳು ಕೆಟ್ಟು ನಿಂತಿವೆ. 8 ಲಾಕರ್ಗಳು ಪತ್ತೆಯಾಗಿದ್ದು, ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಇದು ಕಲ್ಪನೆಗೂ ಮೀರಿದ ದೊಡ್ಡ ಮೊತ್ತದ ಹಣದ ವಹಿವಾಟು ಎಂದರು.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ: ಕಾಂಗ್ರೆಸ್ ಪಕ್ಷ ಎಂದರೆ ಭ್ರಷ್ಟಾಚಾರದ ಗಂಗೋತ್ರಿ. ಇದಕ್ಕೆ ಪ್ರತಿ ರಾಜ್ಯದಲ್ಲಿ, ದೇಶದಲ್ಲಿ ನೂರಾರು, ಸಾವಿರಾರು ಉದಾಹರಣೆಗಳು ಸಿಗುತ್ತವೆ. ಈ ಭ್ರಷ್ಟಾಚಾರದ ಕುರಿತು ವಿಪಕ್ಷಗಳ ಮೈತ್ರಿಕೂಟದ (ಐಎನ್‍ಡಿಐ) ತೃಣಮೂಲ ಕಾಂಗ್ರೆಸ್‍ನ ಮಮತಾ ಬ್ಯಾನರ್ಜಿ, ಇತರ ಪಕ್ಷಗಳ ಮುಖಂಡರಾದ ಅಖಿಲೇಶ್ ಯಾದವ್, ಪ್ರಾಮಾಣಿಕತೆ ಬಗ್ಗೆ ಬಹಳ ಮಾತನಾಡುವ ನಿತೀಶ್‍ಕುಮಾರ್ ಏನು ಹೇಳುತ್ತಾರೆ? ಶರದ್ ಪವಾರ್ ಏನು ಹೇಳುತ್ತಾರೆ ಎಂದು ರವಿಕುಮಾರ್ ಕೇಳಿದರು.
ಇದು ದುಡಿಮೆ ಮಾಡಿ, ಬೆವರಿನಿಂದ ಗಳಿಸಿದ್ದಲ್ಲ. ಇದರ ಬಗ್ಗೆ ಬೆಳಕು ಚೆಲ್ಲಬೇಕು. ದೇಶಕ್ಕೆ ಉತ್ತರ ಹೇಳಬೇಕು. ಈ ಸಂಬಂಧ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ಐಟಿ, ಇಡಿ, ಸಿಬಿಐ ಕುರಿತು ಕಾಂಗ್ರೆಸ್ಸಿಗರು ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಈ ಸಂಸ್ಥೆಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿವೆ. ಅವರನ್ನು ಮೆಚ್ಚಿಕೊಳ್ಳುವುದು ಬಿಟ್ಟು ಟೀಕೆ ಮಾಡುವುದು ಸರಿಯಲ್ಲ ಎಂದು ರವಿಕುಮಾರ್ ಆಕ್ಷೇಪಿಸಿದರು.
ಇದನ್ನೂ ಓದಿ: ರಾಜ್ಯದ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ: ಜಗದೀಶ್ ಶೆಟ್ಟರ್