ಬೆಂಗಳೂರು: "ಕಾಂಗ್ರೆಸ್ಸಿನವರು ತಮ್ಮ ಚಟಕ್ಕೆ, ಚುನಾವಣೆ ಹತ್ತಿರ ಬಂದ ಕಾರಣಕ್ಕೆ ಪೊಲೀಸರಿಗೆ ದೂರು ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ" ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರಿಗೆ ಕಾನೂನಿನ ಅರಿವಿದೆಯೋ ಇಲ್ಲವೋ ನನಗೂ ಗೊತ್ತಿಲ್ಲ" ಎಂದು ಕಿಡಿಕಾರಿದರು.
"ರಮೇಶ್ ಜಾರಕಿಹೊಳಿ ಅವರು ಎಲ್ಲೋ ಏನೋ ಮಾತನಾಡಿದ್ದಾರೆಂದು ವಿಚಾರವನ್ನು ತೆಗೆದುಕೊಂಡು ನಮ್ಮ ಮುಖಂಡರೆಲ್ಲರ ಮೇಲೂ ದೂರು ದಾಖಲಿಸಿದ್ದಾರೆ. 'ಸಿದ್ದರಾಮಯ್ಯನವರೇ ನೀವು ಕುಕ್ಕರ್ ಹಂಚುತ್ತಿದ್ದೀರಲ್ಲಾ, ಯಾರು ಹೇಳಿಕೊಟ್ಟು ಕುಕ್ಕರ್ ಹಂಚುತ್ತಿದ್ದೀರಿ?, ಡಿ.ಕೆ.ಶಿವಕುಮಾರ್ ಅವರೇ, ಯಾರು ಹೇಳಿಕೊಟ್ಟರೆಂದು ಮಿಕ್ಸಿ ಹಂಚುತ್ತಿದ್ದೀರಿ?" ಎಂದು ಪ್ರಶ್ನಿಸಿದರು. "ನಾವು ನಿಮ್ಮನ್ನು ಕುಕ್ಕರ್ ಸಿದ್ದರಾಮಯ್ಯ, ಮಿಕ್ಸಿ ಡಿಕೆಶಿ ಎನ್ನಬಹುದು. ವ್ಯಕ್ತಿ ತಪ್ಪಿ ಮಾತನಾಡಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು. ಆಗ ಅವರು ಸಮಜಾಯಿಷಿ ಕೊಡುತ್ತಿದ್ದರು" ಎಂದರು.
ಹುಲಿ ಕುನ್ನಿ ಕಥೆ: ಮುಖ್ಯಮಂತ್ರಿ, ಪ್ರಧಾನಿ ವಿರುದ್ಧ ಕೆಟ್ಟ ಕೆಟ್ಟ ಪದಗಳಿಂದ ಬೈಯ್ಯುತ್ತೀರಿ. ಮೋದಿಯವರಿಗೆ ನನ್ನನ್ನು ಕಂಡರೆ ಭಯ ಎನ್ನುತ್ತೀರಿ ಎಂದು ಸಿದ್ದರಾಮಯ್ಯರ ವಿರುದ್ಧ ಆಕ್ಷೇಪಿಸಿದರು. ‘ಬೆಟ್ಟದ ಮೇಲೆ ಒಂದು ಹುಲಿ ಹೋಗುತ್ತಿತ್ತಂತೆ. ಕೆಳಗೆ ಒಂದು ಕುನ್ನಿ ಕುಳಿತಿತ್ತಂತೆ. ಆ ಕುನ್ನಿಗೆ ಭಯವೇನೋ ಆಯಿತು. ಆದರೆ, ಹುಲಿ ಈ ಕಡೆ ಗಮನಹರಿಸಲಿಲ್ಲ. ಕುನ್ನಿ ಈ ಕಡೆ ಬಂದು, ಹುಲಿ ನನ್ನ ನೋಡಿ ಹಾಗೇ ಹೊರಟು ಹೋಯಿತು. ನನ್ನನ್ನು ಕಂಡರೆ ಹುಲಿಗೆ ಭಯ ಅಂತಾ ಹೇಳಿತ್ತಂತೆ ಎಂಬ ಕಥೆಯೊಂದನ್ನು ಉಲ್ಲೇಖಿಸಿದರು. ಜೊತೆಗೆ, ಈ ದೇಶದಲ್ಲಿ ಎಲ್ಲಾದರೂ ಒಂದು ಕುನ್ನಿಗೆ ಹುಲಿ ಭಯ ಪಡುತ್ತದೆಯೇ? ಎಂದು ಟಾಂಗ್ ನೀಡಿದರು.
"ಸಿದ್ದರಾಮಯ್ಯನವರೇ ನಿಮ್ಮನ್ನು ಕಂಡರೆ ಸಣ್ಣ ಮಗುವೂ ಭಯಪಡುವುದಿಲ್ಲ. ಯಾಕೆಂದರೆ ನಿಮ್ಮ ಪರಿಸ್ಥಿತಿ ಹಾಗಾಗಿದೆ. ನಿಮ್ಮ ನಾಲಿಗೆ ಮೇಲೆ ಹಿಡಿತ ಇರಲಿ. ಎಲ್ಲರನ್ನೂ ಗೌರವಿಸಿದರೆ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ" ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
"ಸಿದ್ದರಾಮಯ್ಯನವರು ಗೆದ್ದೇಬಿಟ್ಟೆ ಎಂದು ಕೋಲಾರಕ್ಕೆ ಹೋದರು. ಒಂದು ಲಕ್ಷ ಜನ ಸೇರಿಸುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ 60 ಸಾವಿರ ಕುರ್ಚಿ ಹಾಕಿದ್ದರು. ಐದಾರು ಸಾವಿರ ಜನರೂ ಸೇರಲಿಲ್ಲ" ಎಂದು ವ್ಯಂಗ್ಯವಾಗಿ ತಿಳಿಸಿದರು. ಠಇದರಿಂದ ವಿಚಲಿತರಾಗಿ ಬಿಜೆಪಿ ನಾಯಕರ ವಿರುದ್ಧ ದೂರು ಕೊಟ್ಟದ್ದು ಹಾಸ್ಯಾಸ್ಪದ. ಕಾಂಗ್ರೆಸ್ ಎಂದರೆ ಒಂದು ರೀತಿ ಹುಚ್ಚರ ಸಂತೆ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನವರು ಬೆಳಿಗ್ಗಿನಿಂದ ಸಂಜೆ ವರೆಗೆ ಸುಳ್ಳು ಹೇಳುತ್ತಾರೆ. ನಿಮ್ಮ ಯೋಗ್ಯತೆ ಜನರಿಗೆ ಗೊತ್ತಿದೆ" ಎಂದು ಕೈ ವಿರುದ್ಧ ಹರಿಹಾಯ್ದರು.
"ನೀವು ಸುಧಾಕರ್ ಬಗ್ಗೆ ಮಾತನಾಡಿದ್ದೀರಿ. ರವಿಕುಮಾರ್ ಅವರ ಬಗ್ಗೆಯೂ ಮಾತನಾಡಿದ್ದೀರಿ. ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ಅವ್ಯವಹಾರದ ಬಗ್ಗೆ ಬಂದಿಲ್ಲವೇ? ನೀವು ಯಾಕೆ ಅದಕ್ಕೆ ಉತ್ತರ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಬೇಕಾದಷ್ಟು ತಪ್ಪು ಮಾಡಿದ್ದೀರಿ. ಸಾವಿರ ಕೋಟಿಯ ಗೋವಿಂದರಾಜ್ ಡೈರಿಯೂ ಬಂತಲ್ಲವೇ? ಯಾಕೆ ಉತ್ತರ ಕೊಟ್ಟಿಲ್ಲ" ಎಂದು ಪ್ರಶ್ನೆ ಮುಂದಿಟ್ಟರು.
"ಸಮ್ಮಿಶ್ರ ಸರ್ಕಾರ ಬೀಳಿಸಲು ಕುತಂತ್ರ ಮಾಡಿದ್ದು ಸಿದ್ದರಾಮಯ್ಯನವರಲ್ಲವೇ? 17 ಜನ ಶಾಸಕರನ್ನು ಬಿಜೆಪಿಗೆ ಹೋಗಿ ಎಂದು ಕಳುಹಿಸಿದ್ದು ಯಾರು? ಶಾಂತಿ ವನದಲ್ಲಿ ಕುಳಿತು ನೀವು ಅಶಾಂತಿಯ ಮಾತನಾಡಲಿಲ್ಲವೇ? ಕುಮಾರಸ್ವಾಮಿಯವರು ಮುಂದುವರಿಯುವುದು ನಿಮಗೆ ಬೇಕಿರಲಿಲ್ಲ. ನೀವು ವಿರೋಧ ಪಕ್ಷದ ನಾಯಕನಾಗುವುದಕ್ಕಾಗಿ ಆ ಸರ್ಕಾರ ಬೀಳಿಸಿ ಇವತ್ತು ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರಿ. ಶಾಸಕರನ್ನು ಕಳುಹಿಸಿದವರು ಯಾರು?" ಎಂಬ ಪ್ರಶ್ನೆಗೆ ಉತ್ತರಿಸುವಂತೆ ಸವಾಲೆಸೆದರು.
ಇದನ್ನೂ ಓದಿ: ಮೊಯ್ಲಿಯವರು ಸುಧಾಕರ್ ವಂಚಕ ಟಿಕೆಟ್ ಕೊಡ್ಬೇಡಿ ಅಂದಿದ್ರು, ಆದ್ರೂ ಕೊಟ್ವಿ, ಈಗ ಪಶ್ಚಾತ್ತಾಪ ಆಗ್ತಿದೆ: ಸಿದ್ದರಾಮಯ್ಯ