ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ, BWSSB ಚೀಫ್ ಅಕೌಂಟೆಂಟ್ ಪ್ರಶಾಂತ್ 40 ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಅಕೌಂಟೆಂಟ್ ಆಗಿರುವ ಪ್ರಶಾಂತ್, ಟೆಂಡರ್ ವಿಚಾರವಾಗಿ 80 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಂತೆಯೇ ಇಂದು ತಮ್ಮ ಕಚೇರಿಯಲ್ಲಿ 40 ಲಕ್ಷ ರೂ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ದಾಳಿ ಬಳಿಕ ಪ್ರಶಾಂತ್ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಾಬೂನು ಹಾಗೂ ಮಾರ್ಜಕ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್ ವಿಚಾರವಾಗಿ 80 ಲಕ್ಷಕ್ಕೆ ಪ್ರಶಾಂತ್ ಬೇಡಿಕೆ ಇಟ್ಟಿದ್ದಾಗಿ ದೂರುದಾರರು ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ಮಿಂಚಿನ ಕಾರ್ಯಾಚರಣೆ ನಡೆಸಿ ದೂರುದಾರರಿಂದ 40 ಹಣ ಪಡೆಯುತ್ತಿದ್ದ ಪ್ರಶಾಂತ್ ಮೇಲೆ ದಾಳಿ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
2017ರಲ್ಲಿ ಕರ್ನಾಟಕ ರೂರಲ್ ಇನ್ಪ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್ನಲ್ಲಿ ಇಟ್ಟಿದ್ದ (KIRDL) 55 ಕೋಟಿ ಹಣ ಕಬಳಿಕೆ ಪ್ರಕರಣದಲ್ಲಿ ಕೂಡ ಈ ಮೊದಲು ಪ್ರಶಾಂತ್ ಆರೋಪಿಯಾಗಿದ್ದರು. ಈ ಸಂಬಂಧ ಪ್ರಶಾಂತ್ ಸೇರಿ ಮೂವರನ್ನ ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ನಂತರ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಿತ್ತು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಅಕೌಂಟೆಂಟ್ ಆಗಿರುವ ಪ್ರಶಾಂತ್, ಚನ್ನಗಿರಿ ಶಾಸಕರು ಹಾಗೂ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪಅವರ ಪುತ್ರರಾಗಿದ್ದಾರೆ.
ಇದನ್ನೂ ಓದಿ : ಈ ಸರ್ಕಾರ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರ: ಪ್ರಿಯಾಂಕ್ ಖರ್ಗೆ ವಾಗ್ದಾಳಿ