ಬೆಂಗಳೂರು: "ಬಿಜೆಪಿಯ ಬೇರೆ ಶಾಸಕರೂ ಕೂಡ ರಾತ್ರಿ ವೇಳೆ ಮಾಧ್ಯಮಗಳ ಕಣ್ತಪ್ಪಿಸಿ ಬಂದು ಡಿಸಿಎಂ ಡಿ.ಕೆ.ಶಿವಕುಮಾರ್ರನ್ನು ಭೇಟಿ ಮಾಡಿ ಹೋಗ್ತಾರೆ. ನಾನು ಬೇರೆಯವರಂತೆ ಕದ್ದುಮುಚ್ಚಿ ಬರಲ್ಲ. ಎಲ್ಲರೆದುರೇ ಬಂದು ಭೇಟಿ ಮಾಡಿದ್ದೇನೆ" ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಚ್ಚರಿಯ ಹೇಳಿಕೆ ನೀಡಿದರು.
ಬಿಜೆಪಿಯೊಂದಿಗೆ ಬೇಸರಿಸಿಕೊಂಡು ಕಾಂಗ್ರೆಸ್ ನಾಯಕರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಎಸ್.ಟಿ.ಸೋಮಶೇಖರ್ ಸೋಮವಾರ ಮತ್ತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ, ಹೊಸ ವರ್ಷದ ಶುಭಾಶಯ ಕೋರಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಡಿ.ಕೆ.ಶಿವಕುಮಾರ್ ಬೆಂಗಳೂರಿನ ಉಸ್ತುವಾರಿ ಸಚಿವರು. ನಮ್ಮ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಮಾತನಾಡಲು ಭೇಟಿ ಮಾಡಿದ್ದೇನೆ. ಹೊಸ ವರ್ಷದ ಶುಭಾಶಯ ತಿಳಿಸಿದ್ದೇನೆ" ಎಂದು ಹೇಳಿದ್ದಾರೆ.
ಬೇರೆಯವರೂ ಭೇಟಿ ಆಗ್ತಾರೆ: ಪದೇ ಪದೇ ಡಿಸಿಎಂ ಅವರನ್ನು ಭೇಟಿಯಾಗುತ್ತಿರುವ ಕುರಿತ ಪ್ರಶ್ನೆಗೆ, "ಬೇರೆ ಬಿಜೆಪಿ ಶಾಸಕರು ಮಾಧ್ಯಮಗಳ ಕಣ್ಣು ತಪ್ಪಿಸಿ ಬರ್ತಾರೆ. ನಾನು ಹಗಲು ಹೊತ್ತಲ್ಲೇ ರಾಜಾರೋಷವಾಗಿ ಬಂದು ಮಾತನಾಡಿಕೊಂಡು ಹೋಗುತ್ತೇನೆ. ಯಾವುದೇ ಮುಚ್ಚುಮರೆ ನನಗಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಂದು ಸಚಿವರೊಂದಿಗೆ ಮಾತನಾಡುತ್ತೇನೆ. ಇದರಲ್ಲಿ ವಿಶೇಷ ಏನಿದೆ" ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಡಿಕೆಶಿ ಭೋಜನ ಕೂಟಕ್ಕೆ ಹೋಗಿದ್ದ ಸೋಮಶೇಖರ್ರಿಂದ ಮಾಹಿತಿ ಪಡೆದ ಅಶೋಕ್