ಬೆಂಗಳೂರು : ವಿಧಾನಸೌಧಕ್ಕೆ ಹಾಜರಾಗದ ಸಚಿವರ ವಿರುದ್ಧ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚಿಸಿದರೂ ವಿಧಾನಸೌಧಕ್ಕೆ ಸಚಿವರು ಗೈರಾಗುತ್ತಿದ್ದಾರೆ. ಪ್ರತಿ ಗುರುವಾರ ವಿಧಾನಸೌಧ ಕಚೇರಿಯಲ್ಲಿ ಹಾಜರಿರುವಂತೆ ಸೂಚನೆ ನೀಡಿದ್ದಾರೆ.
ಆದರೆ, ಮೊದಲ ಗುರುವಾರವಾದ ನಿನ್ನೆ ಕೇವಲ ಐವರು ಸಚಿವರು ಮಾತ್ರ ಹಾಜರಾಗಿದ್ದರು ಎಂದು ಗೈರಾಗುತ್ತಿರುವ ಸಚಿವರ ವಿರುದ್ಧ ಎಂ ಪಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಚುನಾವಣೆ ಘೋಷಣೆಗೂ ಮುನ್ನವೇ ಹಾನಗಲ್ನಲ್ಲಿ ಟಿಕೆಟ್ಗಾಗಿ ಕೈ-ತೆನೆ ಲಾಬಿ!!
ಸಿಎಂ ವಾರಕ್ಕೆ ಎರಡು ದಿನ ವಿಧಾನಸೌಧಕ್ಕೆ ಬರುತ್ತಾರೆ. ಮುಖ್ಯಮಂತ್ರಿಗಳಿಗೆ ಇರುವಷ್ಟು ಮಂತ್ರಿಗಳಿಗೆ ಕೆಲಸ ಇರುವುದಿಲ್ಲ. ಮಂತ್ರಿಯಾಗಬೇಕಾದರೆ ನಾ ಮುಂದು ತಾ ಮುಂದು ಅಂತ ಮುಗಿ ಬೀಳುತ್ತಾರೆ. ಸಚಿವರಾದ ಮೇಲೆ ವಿಧಾನಸೌಧಕ್ಕೆ ಬರುವುದಿಲ್ಲ. ಸಂಪುಟ ಸಭೆಗೆ ಮಾತ್ರ ಬಂದು ಹೋಗುತ್ತಾರೆ ಎಂದು ಕಿಡಿಕಾರಿದರು.
ಪ್ರತಿಯೊಬ್ಬ ಸಚಿವರು ಶಾಸಕರಿಗೆ ದಿನಚರಿಯ ವೇಳಾ ಪಟ್ಟಿಯನ್ನು ಕಳುಹಿಸಲಿ. ಅದರ ಪ್ರಕಾರ ನಾವು ಭೇಟಿಯಾಗುತ್ತೇವೆ. ನಾವೇ ಭೇಟಿಗೆ ಇಷ್ಟು ಕಷ್ಟಪಡುತ್ತಿದ್ದೇವೆ, ಇನ್ನು ಸಾಮಾನ್ಯ ಕಾರ್ಯಕರ್ತರು ಸಚಿವರ ಮನೆ ಮುಂದೆ ಹೋಗಲು ಸಾಧ್ಯವೇ ? ಈ ಬಗ್ಗೆ ನಾನು ರಾಜ್ಯಾಧ್ಯಕ್ಷರಿಗೆ ದೂರು ನೀಡುತ್ತೇನೆ. ಅರುಣ್ ಸಿಂಗ್ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.