ಬೆಂಗಳೂರು : ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುರುಗೇಶ್ ನಿರಾಣಿ ಯಾವ ರಾಜ್ಯಕ್ಕೆ ಸಿಎಂ ಆಗ್ತಾರೆ, ಏನು ಪಾಕಿಸ್ತಾನಕ್ಕಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ಭ್ರಷ್ಟಾಚಾರ ಅಥವಾ ಅವ್ಯವಹಾರ ಮಾಡಿದ್ದರೂ ದಾಖಲೆ ಇದ್ದರೆ ನಿಶ್ಚಿತವಾಗಿ ಸಿಎಂ ತನಿಖೆ ಮಾಡುತ್ತಾರೆ. ಪಾರದರ್ಶಕ ಅಧಿಕಾರ ಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿಯವರು ನಮಗೆಲ್ಲ ಆದರ್ಶವಾಗಿದ್ದಾರೆ. ನಿರಾಣಿ ಇರಲಿ, ಗುರಾಣಿ ಇರಲಿ. ಯಾರೇ ಅವ್ಯವಹಾರ ಮಾಡಿದ್ದರೂ ಅದರ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಿ ತನಿಖೆ ನಡೆಸಬೇಕು. ಸ್ವಚ್ಛ, ಪಾರದರ್ಶಕ ಸರ್ಕಾರ ಆಗಬೇಕೆಂಬುದು ನಮ್ಮೆಲ್ಲರ ಉದ್ದೇಶ ಎಂದರು.
ಯಾರ್ಯಾರು ಕೋಟ್ ಹೊಲಿಸಿಕೊಂಡಿದ್ದಾರೋ : ಬಿ ವೈ ವಿಜಯೇಂದ್ರಗೆ ಸಚಿವ ಸ್ಥಾನ ನೀಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕಾರದ ಆಸೆಯಿಂದ ಯಾರ್ಯಾರು ಕೋಟ್ ಹೊಲಿಸಿಕೊಂಡಿದ್ದಾರೋ ಗೊತ್ತಿಲ್ಲ. ಬಿಜೆಪಿಯಿಂದ ಬಹಳ ಜನ ಹೋಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಒಳ್ಳೇಯದೆ ಆಯಿತು. ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳು ಅದೇ ಹೇಳಿಕೆಯನ್ನು ತೋರಿಸಿ ಪಕ್ಷವನ್ನು ಗಟ್ಟಿ ಮಾಡುತ್ತಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಉಡುಪಿ ಕಾಲೇಜಿನಲ್ಲಿ ಸಮವಸ್ತ್ರ ವಿವಾದ: ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ
ಯಾರೂ ಅನಿವಾರ್ಯ ಅಲ್ಲ : ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಯಾರೂ ಅನಿವಾರ್ಯ ಅಲ್ಲ. ಬಿಜೆಪಿ ಮತ್ತೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಕುಸ್ತಿ ಇರೋದು ಡಿ ಕೆ ಶಿವಕುಮಾರ್ ಜೊತೆ ಹೊರತು ನಮ್ಮ ಜೊತೆ ಅಲ್ಲ ಎಂದು ಯತ್ನಾಳ್ ಹೇಳಿದ್ರು.
ಡೇಂಜರ್ : ಕಾಂಗ್ರೆಸ್ನಲ್ಲಿರುವ ಸಿ.ಎಂ. ಇಬ್ರಾಹಿಂ ಯಾವಾಗ ಏನು ಮಾತನಾಡುತ್ತಾರೋ ಗೊತ್ತಿಲ್ಲ. ಅವರದ್ದು ಮತ್ತು ಕಾಂಗ್ರೆಸ್ನವರದ್ದು ಏನೇನಿದೆಯೋ ನನಗೆ ಗೊತ್ತಿಲ್ಲ. ಅವರು ಒಮ್ಮೆ ದೇವೇಗೌಡರನ್ನು ಅಪ್ಪ ಎನ್ನುತ್ತಾರೆ. ಇನ್ನೊಮ್ಮೆ ಸಿದ್ದರಾಮಯ್ಯ ಅವರನ್ನು ಅಣ್ಣ ಎನ್ನುತ್ತಾರೆ. ರಾಜಕೀಯದಲ್ಲಿ ಹೀಗೆ ಅಪ್ಪ-ಅಣ್ಣ ಎನ್ನುವವರು ಭಾರಿ ಡೇಂಜರ್ ಎಂದು ಶಾಸಕ ಬಸನಗೌಡ ಯತ್ನಾಳ್ ಅಭಿಪ್ರಾಯಪಟ್ಟರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ