ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಸೋಲಿನ ನಂತರ ಬಿಜೆಪಿ ಕಚೇರಿಯಿಂದ ದೂರ ಉಳಿದಿದ್ದ ಬಹುತೇಕ ಬಿಜೆಪಿ ನಾಯಕರು ಇಂದು ಬಿಜೆಪಿ ಕಚೇರಿಗೆ ಆಗಮಿಸಿದರು. ಸುಧಾಕರ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಜಗನ್ನಾಥ ಭವನದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸುಳಿವು ನೀಡಿದರು.
ಪಕ್ಷ ಬಲವರ್ಧನೆಗೆ ಬಿಜೆಪಿ ಪಣ: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿ ಮತ್ತೆ ಪುಟಿದೇಳಲು ಸಿದ್ಧತೆ ನಡೆಸಿದೆ. ಲೋಕಸಭಾ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ಸಂಬಂಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಮತದಾರ ಚೇತನ ಮಹಾಭಿಯಾನ ಹೆಸರಿನಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸೋತ ಹಾಗೂ ಗೆದ್ದ ನಾಯಕರು ಭಾಗಿಯಾಗಿದ್ದಾರೆ. ಸಂಘಟನಾತ್ಮಕವಾಗಿ ಪಕ್ಷ ಬಲವರ್ಧನೆಗೊಳಿಸಲು ಕೆಲ ಕಾರ್ಯತಂತ್ರ ರೂಪಿಸುವ ಸಂಬಂಧ ಚರ್ಚೆ ನಡೆಯುತ್ತಿದೆ.
ಜಗನ್ನಾಥ ಭವನಕ್ಕೆ ಯಾರೆಲ್ಲ ಭೇಟಿ ನೀಡಿದ್ರು? ಚುನಾವಣೆಯಲ್ಲಿ ಸೋತ ನಂತರ ಬಹಳ ದಿನಗಳ ಬಳಿಕ ಬಿಜೆಪಿ ಕಚೇರಿಯಲ್ಲಿ ಸುಧಾಕರ್ ಪ್ರತ್ಯಕ್ಷರಾದರು. ಪಕ್ಷದ ಕಚೇರಿಯತ್ತ ಸುಳಿಯದೇ ಉಳಿದಿದ್ದ ಬಿ. ಶ್ರೀರಾಮುಲು, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ತಿಪ್ಪಾರೆಡ್ಡಿ, ಮಹೇಶ್ ಕುಮಟಳ್ಳಿ, ಮಾಜಿ ಶಾಸಕಿ ರೂಪಾಲಿ ನಾಯಕ್, ಪ್ರತಾಪ್ ಗೌಡ ಪಾಟೀಲ್, ಬಿ.ಸಿ ಪಾಟೀಲ್ ಆಗಮಿಸಿದರು.
ಗೋವಿಂದ ಕಾರಜೋಳ, ಬಿಸಿ ನಾಗೇಶ್, ಮಾಜಿ ಶಾಸಕ ಕುಡಚಿ ರಾಜೀವ್, ಟಿ.ಡಿ ರಾಜೇಗೌಡ, ಶಾಸಕ ಮಹೇಶ್ ಟೆಂಗಿನಕಾಯಿ, ಬಸವರಾಜ ದಡೇಸಗೂರು, ಅಭಯ್ ಪಾಟೀಲ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸೇರಿದಂತೆ ಹಲವು ನಾಯಕರು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ: ರಕ್ಷಾ ಬಂಧನದಂದು ನ್ಯಾಯಮೂರ್ತಿಗಳಾಗಿ ಆಯ್ಕೆ ಆದ ಅಕ್ಕ - ತಮ್ಮ: ಹಬ್ಬದ ಸಂಭ್ರಮ ಹೆಚ್ಚಿಸಿದ ನ್ಯಾಯಾಧೀಶರ ಮಕ್ಕಳು!
ಸಭೆಗೆ ಗೈರಾದವರಾರು? ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಭೆಗೆ ಗೈರಾಗಿದ್ದಾರೆ. ನಿನ್ನೆಯಷ್ಟೇ ಗೃಹಲಕ್ಷ್ಮಿ ಯೋಜನೆಗೆ ಕ್ಷೇತ್ರದಾದ್ಯಂತ ಅದ್ಧೂರಿ ಚಾಲನೆ ನೀಡಿ ಕಾಂಗ್ರೆಸ್ ಪರ ನಿಲುವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೂ ಗೈರಾಗಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಇಂದಿನ ಸಭೆಗೂ ಸೋಮಶೇಖರ್ ಗೈರಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಎನ್ನಲಾಗಿದೆ. ಇವರ ಜೊತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾದ ಎಂ.ಪಿ ರೇಣುಕಾಚಾರ್ಯ, ಶಂಕರ್ ಪಾಟೀಲ್ ಮುನೇನಕೊಪ್ಪ ಮತ್ತು ಹಿರಿಯ ನಾಯಕ ವಿ ಸೋಮಣ್ಣ ಕೂಡ ಸಭೆಗೆ ಗೈರಾಗಿದ್ದಾರೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ 2 ಸೂಪರ್ ಮೂನ್: ಬೇರೆ ಬೇರೇ ರಾಜ್ಯದಲ್ಲಿ ಕಾಣಿಸಿಕೊಂಡ ಚಂದ್ರನ ಫೋಟೋ ಇಲ್ಲಿದೆ ನೋಡಿ