ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಇದೀಗ ತೆರವಾಗಿರುವ ಸ್ಥಾನಕ್ಕೆ ನೂತನ ಸಿಎಂ ಯಾರು ಎಂಬುದೇ ಕುತೂಹಲ. ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಇಂದು ಸಂಜೆ ಶಾಸಕಾಂಗ ಸಭೆ ನಡೆಯಲಿದ್ದು, ನೂತನ ಸಿಎಂ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಅರುಣ್ ಸಿಂಗ್ ದೆಹಲಿಯಿಂದ ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೂತನ ಮುಖ್ಯಮಂತ್ರಿ ಆಯ್ಕೆಗೋಸ್ಕರ ದೆಹಲಿಯಿಂದ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಬರ್ತಿದ್ದು, ಶಾಸಕಾಂಗ ಸಭೆಯ ಬಳಿಕ ಹೆಸರು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಬಗ್ಗೆ ಅರುಣ್ ಸಿಂಗ್ ಹೇಳಿದ್ದೇನು?
ಸಂಸದೀಯ ಮಂಡಳಿ ನಿರ್ದೇಶನದಂತೆ ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲಾಗುವುದು ಎಂದಿರುವ ಅವರು, ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದರು.
ನಾಳೆ ನೂತನ ಸಿಎಂ ಪ್ರಮಾಣ, ವಾರದಲ್ಲೇ ಹೊಸ ಸಂಪುಟ ರಚನೆ
ಇನ್ನು ನಾಳೆ ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವಾರದಲ್ಲಿ ನೂತನ ಸಂಪುಟ ರಚನೆೆಯೂ ಆಗಲಿದೆ ಎಂಬ ಮಾಹಿತಿಯೂ ದೊರೆತಿದೆ.
ಇಂದು ಸಂಜೆ ನಡೆಯಲಿರುವ ಸಭೆಯಲ್ಲೇ ನೂತನ ನಾಯಕನ ಆಯ್ಕೆ ಮಾಡಲಿದ್ದು, ಹೆಸರನ್ನು ಹೈಕಮಾಂಡ್ಗೆ ಕಳುಹಿಸಿಕೊಡಲಾಗುತ್ತದೆ. ನಾಳೆ ದೆಹಲಿಯಿಂದಲೇ ಹೈಕಮಾಂಡ್ ಶಾಸಕಾಂಗ ಪಕ್ಷದ ನೂತನ ನಾಯಕನ ಹೆಸರನ್ನು ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ರಾಜಭವನಕ್ಕೆ ಕಳುಹಿಸಲಿದ್ದು, ನೂತನ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡನೆ ಮಾಡಲಿದೆ.
ನಾಳೆ ಅಥವಾ ನಾಡಿದ್ದು ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ನಡೆಯಲಿದ್ದು, ಒಂದು ವಾರದ ನಂತರ ಸಚಿವ ಸಂಪುಟ ರಚನೆಯಾಗಲಿದೆ. ಮುಖ್ಯಮಂತ್ರಿ ಪ್ರಮಾಣವಚನದ ನಂತರವೇ ಸಂಪುಟದಲ್ಲಿ ಯಾರೆಲ್ಲ ಇರಬೇಕು ಎನ್ನುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಮತ್ತೆ ಸಭೆ ನಡೆಸಿ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. ವೀಕ್ಷಕರಾದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಸಮ್ಮುಖದಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿಕೆ ಅರುಣಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ನೂತನ ನಾಯಕನ ಆಯ್ಕೆ ನಡೆಯಲಿದೆ.