ಬೆಂಗಳೂರು: ಸೋಮವಾರ ಸದನದಲ್ಲಿ ಪಕ್ಷದ ನಿಲುವು ಸೇರಿದಂತೆ ಮುಂದಿನ ನಡೆ ಕುರಿತು ಚರ್ಚಿಸಲು ಇಂದು ಕರೆಯಲಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮಾಧುಸ್ವಾಮಿ ಸೇರಿದಂತೆ ಕೆಲ ಹಿರಿಯ ಸದಸ್ಯರ ಅನುಪಸ್ಥಿತಿಯ ಕಾರಣ ನಾಳೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಪ್ರಸ್ತುತ ಸದನದಲ್ಲಿ ಬಿಜೆಪಿ ಪರವಾಗಿ ಸಮರ್ಥವಾಗಿ ಮಾತನಾಡುತ್ತಾ, ವಿಧಾನಸಭೆ ಕಲಾಪಕ್ಕೆ ಎರಡು ದಿನ ರಜೆ ಇರುವ ಕಾರಣ ಮಾಧುಸ್ವಾಮಿ ಕ್ಷೇತ್ರದ ಜನತೆಯ ಅಹವಾಲು ಆಲಿಸುತ್ತಿದ್ದಾರೆ. ಎಲ್ಲ ಶಾಸಕರು ರೆಸಾರ್ಟ್ ನಲ್ಲಿಯೇ ತಂಗಿದ್ದರೂ ಮಾಧುಸ್ವಾಮಿ ಮಾತ್ರ ಕ್ಷೇತ್ರಕ್ಕೆ ತೆರಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಶಾಸಕಾಂಗ ಸಭೆ ನಡೆಸುವುದು ಬೇಡ, ಅಲ್ಲದೇ ಇನ್ನು ಕೆಲ ಹಿರಿಯ ನಾಯಕರು ಕೂಡ ಸ್ಥಳದಲ್ಲಿ ಇಲ್ಲದ ಕಾರಣ ಶಾಸಕಾಂಗ ಸಭೆಯನ್ನು ನಾಳೆ ಸಂಜೆ ಅಥವಾ ರಾತ್ರಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇಂದು ಕೇವಲ ಅನೌಪಚಾರಿಕವಾಗಿ ಶಾಸಕರೊಂದಿಗೆ ಮಾತುಕತೆ ನಡೆಸಿದ ಯಡಿಯೂರಪ್ಪ ಎಲ್ಲವೂ ಸರಿಯಾಗಲಿದೆ ತಾಳ್ಮೆಯಿಂದ ಕಾಯೋಣ ಎಂದು ಸಲಹೆ ನೀಡಿದ್ದಾರೆ. ಸೋಮವಾರದ ಕಲಾಪದಲ್ಲಿ ಕೂಡ ಶುಕ್ರವಾರದ ಕಲಾಪದಲ್ಲಿ ನಡೆದುಕೊಂಡ ರೀತಿಯಲ್ಲಿಯೇ ನಡೆದುಕೊಳ್ಳೋಣ ಎಂಬ ಸಲಹೆ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ನಾಳಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಮುಂದಿರುವ ಆಯ್ಕೆ, ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ಇತ್ಯಾದಿ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.