ಬೆಂಗಳೂರು: ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ವಿಳಂಬವಾಗುವಂತೆ ಮಾಡುತ್ತಿದೆ ಎಂದು ಟೀಕಿಸಿ ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಬಿಜೆಪಿ ನಾಯಕರು ಟ್ವೀಟ್ ವಾರ್ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ-120 ಕ್ಷೇತ್ರಗಳಲ್ಲಿ ಠೇವಣಿ ಇಲ್ಲ, ಲೋಕಸಭಾ ಚುನಾವಣೆಯಲ್ಲಿ -1 ಸೀಟ್, ಹೀಗೆ ಜನರು ತಿರಸ್ಕರಿಸಿರುವ ಪಕ್ಷದಿಂದ ಬಂದ ಮುಖ್ಯಮಂತ್ರಿಗಳು, ಅಪವಿತ್ರ ಮೈತ್ರಿಯಿಂದ ಸರ್ಕಾರ ರಚನೆ ಮಾಡಿ ಈಗ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಬಿಜೆಪಿಗೆ ಸದನದಲ್ಲಿ ದಿನವಿಡೀ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟ್ವೀಟ್ ಮೂಲಕ ಜೆಡಿಎಸ್ ಹಾಗೂ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.


ಸ್ವಾಮಿ ಮುಖ್ಯಮಂತ್ರಿಗಳೇ, ಜಡ್ಜ್ಮೆಂಟ್ ಡೇ ಅಷ್ಟೇ ಅಲ್ಲ ಕರ್ನಾಟಕದ ಪ್ರತಿಯೊಬ್ಬರು ನಿಮಗೆ ಡೇ ಅಂಡ್ ನೈಟ್ ಹೇಳುತ್ತಿರುವುದು ಸತ್ಯ, ಧರ್ಮ ಇರುವ ರಾಜಧರ್ಮ ಪಾಲನೆ ಮಾಡಿ ಅಂತ. ನೀವು ನೋಡಿದರೆ ರೈತರ ಸಾಲ ಮನ್ನಾ ಮಾಡದೇ ಅನ್ನದಾತರ ಪಾಲಿನ "ಯಮಧರ್ಮ" ನ ತರಹ ಆಡುತ್ತಿದ್ದೀರಾ ಎಂದು ಮತ್ತೊಂದು ಟ್ವೀಟ್ ಮಾಡಿ ಸಿಎಂ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ.
ಅಷ್ಟಕ್ಕೆ ನಿಲ್ಲದೆ, ನಿಮಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದ್ದಿದ್ದರೆ ಈ ಅನೈತಿಕ ಸರ್ಕಾರವನ್ನು ರಚಿಸುತ್ತಿರಲಿಲ್ಲ. ಮಾಡಬಾರದ ಅನಾಚಾರಗಳನ್ನು ಮಾಡಿ ಈಗ ಮನೆಯ ಮುಂದೆ ಬೃಂದಾವನ ಕಟ್ಟಲು ಹೊರಟರೆ ನಿಮ್ಮನ್ನು ನಂಬಲು ರಾಜ್ಯದ ಜನತೆ ಏನು ಮೂರ್ಖರೆ ಎಂದು ಮಾಜಿ ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.