ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ಪುಣ್ಯತಿಥಿಯಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಗೌರವ ವಂದನೆ ಸಲ್ಲಿಸಿದ್ದಾರೆ.
ಅಜಾತಶತ್ರು, ಕವಿ ಹೃದಯದ ಮಹಾನ್ ಮುತ್ಸದ್ಧಿ, ಮಾಜಿ ಪ್ರಧಾನಮಂತ್ರಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ನನ್ನ ಅನಂತ ಪ್ರಣಾಮಗಳು. ಅವರ ನಿಷ್ಠೆ, ಪ್ರಾಮಾಣಿಕತೆ, ಕಾರ್ಯವೈಖರಿಗಳು ಆದರ್ಶಪ್ರಾಯವಾದದ್ದು. ವೈಯಕ್ತಿಕವಾಗಿ ವಾಜಪೇಯಿ ಅವರ ಪ್ರಭಾವ, ಮಾರ್ಗದರ್ಶನಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಭಾರತರತ್ನ, ನಮ್ಮೆಲ್ಲರ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಎರಡನೇ ಪುಣ್ಯಸ್ಮರಣೆಯ ದಿನ. ಅವರಿಗೆ ಶ್ರದ್ಧಾಪೂರ್ವಕ ನಮನಗಳು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ಪ್ರಣಾಮಗಳು. 'ಜೈ ಜವಾನ್,ಜೈ ಕಿಸಾನ್' ಜೊತೆಗೆ 'ಜೈ ವಿಜ್ಞಾನ್' ಎಂಬ ಮಂತ್ರದ ಮೂಲಕ ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅಟಲ್ ಜೀ, ಅಭಿವೃದ್ಧಿ ಹರಿಕಾರರಾಗಿ ಜನಮಾನಸದಲ್ಲಿ ಅಮರರಾಗಿದ್ದರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ದೇಶ ಕಂಡ ಶ್ರೇಷ್ಠ ಪ್ರಧಾನಿ, ಸರಿಸಾಟಿಯಿಲ್ಲದ ಮೇರು ವ್ಯಕ್ತಿತ್ವ, ದೇಶ ಕಂಡ ಮಹಾನ್ ನಾಯಕ, ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಮಾಜಿ ಪ್ರಧಾನಮಂತ್ರಿಗಳು, ಅಜಾತಶತ್ರು, ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಪುಣ್ಯತಿಥಿಯಂದು ಅವರಿಗೆ ಕೋಟಿ ಕೋಟಿ ನಮನಗಳು. ಅವರು ನುಡಿದ ಮಾತುಗಳು ನಮಗೆ ದಾರಿದೀಪ, ಅವರು ನಡೆದ ದಾರಿಯೇ ನಮಗೆ ಆದರ್ಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.